ಕೊಪ್ಪಳ: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ( PSI Recruitment Scam ) ಅಕ್ರಮ ಹೊರ ಬಂದ ನಂತ್ರ, ನೇಮಕಾತಿಯನ್ನೇ ರದ್ದುಗೊಳಿಸಲಾಗಿತ್ತು. ಅಲ್ಲದೇ ಈ ಕೇಸ್ ನಲ್ಲಿ ಹಲವರನ್ನು ಸಿಐಡಿ ಬಂಧಿಸಿ ಜೈಲಿಗಟ್ಟಿದೆ. ಈ ಬೆನ್ನಲ್ಲೇ ಈಗ ಪ್ರಕರಣಕ್ಕೆ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಶಾಸಕರೊಬ್ಬರು ( BJP MLA ) 15 ಲಕ್ಷ ಪಿಎಸ್ಐ ನೇಮಕಕ್ಕೆ ಕೇಳಿದ್ದಾರೆ ಎನ್ನಲಾಗಿರುವಂತ ಆಡಿಯೋ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲಕ ಪರಸಪ್ಪ ಬೇಗೂರು ಎಂಬುವರು ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಎಂಬುವರೊಂದಿಗೆ ಮಾತನಾಡಿರೋ ಆಡಿಯೋವೇ ವೈರಲ್ ಆಗಿರೋದು.
ವೈರಲ್ ಆಗಿರುವಂತ ಆಡಿಯೋದಲ್ಲಿ ಪಿಎಸ್ಐ ನೇಮಕಾತಿಗಾಗಿ ಕೊಟ್ಟಿದ್ದಂತ 15 ಲಕ್ಷ ಹಣವನ್ನು ವಾಪಾಸ್ ಕೊಡಿ ಎಂಬುದಾಗಿ ಪಿಎಸ್ಐ ಹುದ್ದೆಯ ಆಕಾಂಕ್ಷಿ ಪರಸಪ್ಪ ಬೇಗೂರು ಎಂಬಾತ ಕೇಳಿರೋದಾಗಿ ಇದೆ.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ
ಹೀಗಿದೆ ವೈರಲ್ ಆಗಿರುವಂತ ಆಡಿಯೋದಲ್ಲಿನ ಸಂಭಾಷಣೆ
ಪರಸಪ್ಪ: ನನ್ನ ಹಣ ಕೊಡಿ. ಕೈ ಮುಗಿತೀನಿ. ಸರ್, ಬರ್ತೀನಿ ಮೂರ್ನಾಲ್ಕು ದಿನ ಆಯಿತು.
ಶಾಸಕ: ನಾನು ಬೆಂಗಳೂರಿಗೆ ಬಂದಿದ್ದೇನೆ. ಜಿಲ್ಲಾಧ್ಯಕ್ಷ ದೊಡ್ಡನಗೌಡ ಹತ್ತಿರ ಮಾತನಾಡಿದ್ದೇನೆ.
ಪರಸಪ್ಪ: ಹೌದು ಸರ್, ದೊಡ್ಡನಗೌಡರು ನಮಗೆ ಬೇಕಾದವರು.
ಶಾಸಕ: ನನಗೆ ಯಾರಿಂದಲೂ ಹೇಳಿಸುವುದು, ಕೇಳಿಸುವುದು ಬೇಕಾಗಿಲ್ಲ. ದುಡ್ಡು ವಾಪಸ್ ಕೊಡುತ್ತೇನೆ.
ಪರಸಪ್ಪ: ಹಣ ಕೊಟ್ಟು ಒಂದೂವರೆ ವರ್ಷ ಆಯಿತು ಸರ್.
ಶಾಸಕ: ಹಣ ಪಡೆದಿದ್ದೇನೆ ಸರ್ಕಾರಕ್ಕೆ ಕೊಟ್ಟ ಹಣ ಅದು. ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ಕೊಡುತ್ತೇನೆ.
ಪರಸಪ್ಪ: ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ನಿಮ್ಮ ಬಳಿ ಬರುವೆ. ಹಣದ ತೊಂದರೆಯಾಗಿದೆ.
ಶಾಸಕ: ಬಾರಪ್ಪ, ಅನುಮಾನ ಬೇಡ. ಹಣ ಖಂಡಿತಾ ಕೊಡುತ್ತೇನೆ.
ಎರಡನೇ ಆಡಿಯೋದಲ್ಲಿ ಮಾತನಾಡಿರುವಂತ ವಿಷಯ ಹೀಗಿದೆ
ಶಾಸಕ: ನನಗೆ ಎಷ್ಟು ಕೋಟಿ ಹಣ ಕೊಟ್ಟಿದ್ದೀಯಪ್ಪ
ಪರಸಪ್ಪ: ಸರ್, ₹15 ಲಕ್ಷ ಕೊಟ್ಟಿದ್ದೇನೆ.
ಶಾಸಕ: ನಿನಗೆ ಮಾನ ಮರ್ಯಾದೆ ಎನಾದರೂ ಇದೆಯಾ, ಇಲ್ಲವಾ? ಯಾರ ಮುಂದೆ ಎನು ಮಾತನಾಡಬೇಕು ಎನ್ನುವ ಸೌಜನ್ಯ ಇದೆಯೊ ಇಲ್ಲವೊ?
ಪರಸಪ್ಪ: ಎಲ್ಲಾ ಹೇಳಿದ್ದೇವಲ್ಲ ಸರ್.
ಶಾಸಕ: ಮಾತುಕತೆ ನಡೆದಿದೆ. ನೋಡ್ರಿ ಪರಸಪ್ಪ ಮಾತು ಲೂಸ್ ಆಗಿದ್ರೆ ಸರಿ ಇರಲ್ಲ. ನಿನ್ನ ಹಣದಿಂದ ನನಗೆ ಎನೂ ಆಗಬೇಕಾಗಿಲ್ಲ. ಮಾತನಾಡಬೇಕಾದರೆ ಬಹಳ ಗೌರವದಿಂದ ಇರಬೇಕು. ಹಣ ಕೊಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.
ಪರಸಪ್ಪ: ನಾನು ಬಡವ ಇದ್ದೇನೆ ಸರ್.
ಶಾಸಕ: ನೀನು ಬಡವ, ಶ್ರೀಮಂತ ಎನೇ ಆಗಿರು. ಮಾತು ಸರಿಯಾಗಿ ಇರಬೇಕು.
ಪರಸ್ಪಪ್ಪ: ಸರ್, ಹಣ ಕೊಡುವುದಾದರೆ ಕೊಡಿ. ಇಲ್ಲವಾದರೆ ಇಲ್ಲ ಎಂದು ಹೇಳಿಬಿಡಿ.
ಶಾಸಕ: ನಾನು ಕೊಡ್ತೀನಿ. ಇವೆಲ್ಲ ಹೇಳಬೇಡ. ನಿನ್ನ ಬಳಿ ಸಾಲ ತಂದಿಲ್ಲ. ಇಷ್ಟೇ ದಿನದಲ್ಲಿ ಕೊಡ್ತೇನೆ ಎಂದು ಹೇಳಿದ್ನಾ?
ಪರಸಪ್ಪ: ಕೊಡುವುದಿಲ್ಲ ಎಂದು ಹೇಳಿ ಬಿಡಿ ಸರ್.
ಶಾಸಕ: ಕೊಡುವುದಿಲ್ಲ ಎಂದು ನಾನು ಯಾಕೆ ಹೇಳಲಿ. ಅಂತ ಚಿಲ್ಲರೆ ಕೆಲಸ ಮಾಡುವುದಿಲ್ಲ.
ಹೀಗೆ ವೈರಲ್ ಆಗಿರುವಂತ ಆಡಿಯೋ ಮೂಲಕ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಪಿಎಸ್ಐ ಅಭ್ಯರ್ಥಿಗಳಿಂದ ಹಣ ಪಡೆದಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆಡಿಯೋ ವೈರಲ್ ಆಗುವ ಮೂಲಕ, ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಮತ್ತೊಂದು ತಿರುವು ಪಡೆದಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಿ, ಯಾವ ಕ್ರಮ ಕೈಗೊಳ್ಳಲಿದೆ ಎಂಬುದಾಗಿ ಕಾದು ನೋಡಬೇಕಿದೆ.