ಮಿಡ್ಲ್ಯಾಂಡ್ (ಟೆಕ್ಸಾಸ್): ಅಮೆರಿಕದ ಟೆಕ್ಸಾಸ್ ರಾಜ್ಯದ ಮಿಡ್ಲ್ಯಾಂಡ್ನಲ್ಲಿ ಶುಕ್ರವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಕ್ಟರ್ ಮಾತಾ ವಿಲ್ಲಾರಿಯಲ್ (45) ಎಂದು ಗುರುತಿಸಲಾದ ಶೂಟರ್, ಪೊಲೀಸರೊಂದಿಗಿನ ಸುದೀರ್ಘ ಸಶಸ್ತ್ರ ಸಂಘರ್ಷದ (Standoff) ಬಳಿಕ ಕಟ್ಟಡದೊಳಗೆ ಹೆಣವಾಗಿ ಪತ್ತೆಯಾಗಿದ್ದಾನೆ.
ಸ್ಥಳೀಯ ಕಾಲಮಾನ ಬೆಳಗ್ಗೆ ಸುಮಾರು 8 ಗಂಟೆಗೆ ಬಂದೂಕುಧಾರಿಯೊಬ್ಬ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆಯ ಪ್ರಕಾರ, ಆರೋಪಿಯು ಅಲ್ಲಿ ನೆರೆದಿದ್ದ ಸಾರ್ವಜನಿಕರು ಮತ್ತು ಅಧಿಕಾರಿಗಳ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗರೆದಿದ್ದಾನೆ.
ಈ ಹಿಂದೆಯೂ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪತಿ
ಆರೋಪಿ ವಿಲ್ಲಾರಿಯಲ್ ಇದೇ ವಾರದ ಆರಂಭದಲ್ಲಿ ಕಾರು ಚೇಸಿಂಗ್ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಪರಾಧಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
”ನಾವು ಈಗಾಗಲೇ ಈ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದೆವು” ಎಂದು ತಿಳಿಸಿರುವ ಅಧಿಕಾರಿಗಳು, ಶುಕ್ರವಾರ ನಡೆದ ಗುಂಡಿನ ದಾಳಿಯು ಈ ಹಿಂದೆ ಘಟನೆ ನಡೆದಿದ್ದ ಜಾಗಕ್ಕೆ ಅತ್ಯಂತ ಹತ್ತಿರದಲ್ಲೇ ಸಂಭವಿಸಿದೆ ಎಂದು ಹೇಳಿದ್ದಾರೆ.
ಕೈಬಿಟ್ಟ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ಶೂಟರ್
ಶುಕ್ರವಾರದ ಶೂಟ್ಔಟ್ ಬಳಿಕ, ವಿಲ್ಲಾರಿಯಲ್ ಅಲ್ಲಿಯೇ ಇದ್ದ ಪಾಳುಬಿದ್ದ ಪಶು ಚಿಕಿತ್ಸಾಲಯದ (Veterinary clinic) ಕಟ್ಟಡದೊಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದನು. ತಕ್ಷಣವೇ ಇಡೀ ಕಟ್ಟಡವನ್ನು ಸುತ್ತುವರಿದ ಪೊಲೀಸರು, ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯಾಚರಣೆ ಆರಂಭಿಸಿದರು.
ಮಿಡ್ಲ್ಯಾಂಡ್ ಪೊಲೀಸ್ ಮುಖ್ಯಸ್ಥ ಗ್ರೆಗ್ ಸ್ನೋ ಮಾತನಾಡಿ, ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಶೂಟರ್ ಅವರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿಸಿದರು. “ಹಲವಾರು ಅಧಿಕಾರಿಗಳು ತಮ್ಮ ಪೆಟ್ರೋಲಿಂಗ್ ಕಾರುಗಳ ಹಿಂದೆಯೇ ಸಿಲುಕಿಕೊಂಡಿದ್ದರು. ನಂತರ ಶಸ್ತ್ರಸಜ್ಜಿತ ವಾಹನವನ್ನು (Armoured vehicle) ಬಳಸಿ ಅವರನ್ನು ರಕ್ಷಿಸಬೇಕಾಯಿತು,” ಎಂದು ಅವರು ಹೇಳಿದರು. ಘಟನೆಯಲ್ಲಿ ಯಾವುದೇ ಪೊಲೀಸ್ ಅಧಿಕಾರಿಗೆ ಗಾಯಗಳಾಗಿಲ್ಲ.
ಸ್ಥಳದಲ್ಲಿದ್ದ ಜನರನ್ನು ತಕ್ಷಣವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ ಸ್ನೋ, “ಶೂಟರ್ಗೆ ಮತ್ತಷ್ಟು ಜನರನ್ನು ಗುರಿಯಾಗಿಸಲು ಅವಕಾಶ ಸಿಗದಂತೆ ನಾವು ತಕ್ಷಣವೇ ಕ್ರಮ ಕೈಗೊಂಡೆವು” ಎಂದರು.








