ಹಾಸನ : ಕಳೆದ 2 ದಿನಗಳ ಹಿಂದೆ ಮಂತ್ರಾಲಯದ ಬಳಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಮತ್ತಿಬ್ಬರು ಸಾವಿಗೀಡಾಗುವ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿದೆ. ಮೃತರಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಪ್ರಯಾಣಿಸುತ್ತಿದ್ದ ಇಬ್ಬರು ಸಂಬಂಧಿಕರೂ ಸೇರಿದ್ದಾರೆ.
ಎ.16ರಂದು ಬೇಲೂರು ತಾಲೂಕು ಶೆಟ್ಟಿಗೆರೆ ಕುಟುಂಬದ 18 ಮಂದಿ ಮಂತ್ರಾಲಯಕ್ಕೆ ಪಯಣ ಬೆಳೆಸಿದ್ದರು. ಗೂಡ್ಸ್ ಮತ್ತು ಲಾರಿಯ ನಡುವೆ ಸಂಭವಿಸಿದ್ದ ಅಪಘಾತದಿಂದಾಗಿ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದು, ಎ.17ರಂದು ಚಿಕಿತ್ಸೆ ಫಲಿಸದೆ ಬಾಲಕಿ ತೇಜಸ್ವಿನಿ (17) ಸಾವನ್ನಪ್ಪಿದ್ದರಿಂದ ಒಂದೇ ಕುಟುಂಬದ 7 ಮಂದಿ ಸಾವಿಗೀಡಾಗಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮತ್ತಿಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗುವ ಮೂಲಕ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಜಯಮ್ಮ (65), ಶುಭ (35) ಇಬ್ಬರೂ ಮಹಿಳೆಯರು ಮೃತಪಡುವ ಮೂಲಕ ಕುಟುಂಬದಲ್ಲಿ ಮತ್ತಷ್ಟು ಶೋಕ ಮಡುಗಟ್ಟಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.








