ಅಹಮದಾಬಾದ್: ಅಹಮದಾಬಾದ್‌ನ ಘಟ್ಲೋಡಿಯಾ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ, ಸುಮಾರು 50ಕ್ಕೂ ಹೆಚ್ಚು ಮಂದಿ ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದಾರೆ. ಈ ಪೈಕಿ ಏಳು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುರುವಾರ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಉಂಟಾದ ಸೋರಿಕೆಯು ನರ್ಮದಾ ನೀರಿನ ಸರಬರಾಜಿನೊಂದಿಗೆ ಒಳಚರಂಡಿ ನೀರು ಮಿಶ್ರಣಗೊಳ್ಳಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟ್ಲೋಡಿಯಾ ಲೋಕಸಭಾ ಕ್ಷೇತ್ರವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ, ಅವರು ಕೂಡಲೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅಹಮದಾಬಾದ್ ಮೇಯರ್ ಹಿತೇಶ್ ಬಾರೋಟ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಮುನ್ಸಿಪಲ್ ಕಮಿಷನರ್ ಬಂಚಾನಿಧಿ ಪಾನಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಮಿತ್ ಶಾ ಸೂಚಿಸಿದ್ದಾರೆ. ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾಲಿಕೆಯ ಆರೋಗ್ಯ ತಂಡಗಳು ಅಸ್ವಸ್ಥತೆ ವರದಿಯಾಗಿರುವ ಎಲ್ಲಾ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಮನೆ-ಮನೆ ಸಮೀಕ್ಷೆ ನಡೆಸಿವೆ. ಅಲ್ಲದೆ, ನೀರಿನ ಶುದ್ಧೀಕರಣಕ್ಕಾಗಿ ಕ್ಲೋರಿನ್ ಮಾತ್ರೆಗಳನ್ನು ವಿತರಿಸಲಾಗಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ವೈದ್ಯಕೀಯ ಅಧಿಕಾರಿ ಡಾ. ಭವಿನ್ ಸೋಲಂಕಿ ಪ್ರಕಾರ, ಪ್ರದೇಶದಿಂದ 19 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಮುನ್ಸಿಪಲ್ ಕಮಿಷನರ್ ಬಂಚಾನಿಧಿ ಪಾನಿ ಅವರ ಪ್ರಕಾರ, ಮೇ 30 ರಂದು ಪೈಪ್‌ಲೈನ್‌ನಲ್ಲಿ ದೋಷ ಉಂಟಾದಾಗ ಈ ಸಮಸ್ಯೆ ಉದ್ಭವಿಸಿತು. ಸುಮಾರು 50 ಮಂದಿ ಓಪಿಡಿ ಮಟ್ಟದಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ನಗರದ 26ಕ್ಕೂ ಹೆಚ್ಚು ಪ್ರದೇಶಗಳನ್ನು ‘ಅಧಿಕ ಅಪಾಯ’ (High-risk) ಎಂದು ಗುರುತಿಸಿ ನಿರಂತರ ನಿಗಾ ಇಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆಕಾಂಕ್ಷ ಅಪಾರ್ಟ್‌ಮೆಂಟ್ಸ್ ಸೊಸೈಟಿಯ ಅಧ್ಯಕ್ಷ ರಾಕೇಶ್‌ಭಾಯ್ ಪಟೇಲ್ ಅವರ ಪ್ರಕಾರ, ಸುಮಾರು 500ಕ್ಕೂ ಹೆಚ್ಚು ನಿವಾಸಿಗಳು ಅಸ್ವಸ್ಥರಾಗಿದ್ದಾರೆ. “ಒಳಚರಂಡಿ ಪೈಪ್ ಒಡೆದಿದ್ದರಿಂದ ನರ್ಮದಾ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣವಾಗಿದೆ. ಸರಾಸರಿ ಪ್ರತಿ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.








