ಮುಂಬೈ: ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಮುಖ್ಯಸ್ಥ ಮತ್ತು ಖ್ಯಾತ ನಿರ್ಮಾಪಕ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
2014 ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಅವರ ಅಧಿಕಾರವಧಿಯಲ್ಲಿ ಸೆನ್ಸಾರ್ ಮಂಡಳಿಯು ಹಲವು ವಿವಾದಗಳಿಗೆ ಮತ್ತು ಕಠಿಣ ನಿರ್ಧಾರಗಳಿಗೆ ಸಾಕ್ಷಿಯಾಗಿತ್ತು.
1980 ಮತ್ತು 90ರ ದಶಕದ ಬಾಲಿವುಡ್ನ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ, ಗೋವಿಂದ ಮತ್ತು ಚಂಕಿ ಪಾಂಡೆ ಅವರಂತಹ ನಟರಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡಿದ್ದರು. ‘ಶೋಲಾ ಔರ್ ಶಬ್ನಮ್’, ‘ಆಂಖೇ’, ಮತ್ತು ‘ಅವತಾರ್’ ಅವರ ನಿರ್ಮಾಣದ ಕೆಲವು ಜನಪ್ರಿಯ ಚಿತ್ರಗಳಾಗಿವೆ.
ಚಲನಚಿತ್ರ ನಿರ್ಮಾಪಕರ ಸಂಘಟನೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಚಿತ್ರೋದ್ಯಮದ ಹಲವು ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದರು.








