ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (GBDA) ವತಿಯಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಬೃಹತ್ ಟೌನ್‌ಶಿಪ್ ಯೋಜನೆಗೆ ಜೆಡಿಎಸ್ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ತೀಕ್ಷ್ಣ ವಾಗ್ದಾಳಿಯ ಬೆನ್ನಲ್ಲೇ, ಈಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪತ್ರ ಬರೆದು ಈ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಬಲವಾಗಿ ಒತ್ತಾಯಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿ
ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಹೆಚ್.ಡಿ. ದೇವೇಗೌಡರು ಬಿಡದಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ಮತ್ತು ಅತಿ ಸಣ್ಣ ಹಿಡುವಳಿದಾರರ ಪರಿಸ್ಥಿತಿಯನ್ನು ವಿವರವಾಗಿ ಪ್ರಸ್ತಾಪಿಸಿದ್ದಾರೆ. “ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಹಳ್ಳಿಗಳಲ್ಲಿ ಸುಮಾರು 10,000 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಟೌನ್‌ಶಿಪ್ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಭಾಗದ ಬಹುಪಾಲು ರೈತರು ಜೀವನ ನಿರ್ವಹಣೆಗೆ ಕೃಷಿ, ರೇಷ್ಮೆ, ಹೈನುಗಾರಿಕೆ ಮತ್ತು ತೋಟಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಹಸಿರು ಕ್ರಾಂತಿಯ ಈ ಫಲವತ್ತಾದ ಭೂಮಿಯನ್ನು ಕಿತ್ತುಕೊಂಡರೆ ಸಾವಿರಾರು ರೈತ ಕುಟುಂಬಗಳು ಬೀದಿಪಾಲಾಗುತ್ತವೆ ಮತ್ತು ಯುವಕರು ನಿರುದ್ಯೋಗಿಗಳಾಗುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಸರಕ್ಕೆ ಅಪಾರ ಹಾನಿ
ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಈಗಾಗಲೇ ಸರ್ಕಾರ ಕೈಗಾರಿಕಾ ಉದ್ದೇಶಗಳಿಗಾಗಿ ಸಾವಿರಾರು ಎಕರೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಕೃಷಿ ಭೂಮಿಯ ಸುತ್ತಲೂ ರೈತರು ಬೆಳೆಸಿರುವ ಲಕ್ಷಾಂತರ ಮರ-ಗಿಡಗಳು ಈ ಟೌನ್‌ಶಿಪ್ ಯೋಜನೆಯಿಂದ ಸಂಪೂರ್ಣವಾಗಿ ನಾಶವಾಗಲಿದ್ದು, ಪರಿಸರಕ್ಕೆ ಅಪಾರ ಹಾನಿ ಉಂಟಾಗಲಿದೆ ಎಂದು ದೇವೇಗೌಡರು ಪತ್ರದಲ್ಲಿ ಎಚ್ಚರಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆ ಎಂದು ಕಿಡಿಕಾರಿದ್ದ ಹೆಚ್‌ಡಿಕೆ
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು. “ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಚದರ ಅಡಿಗೆ ದರ ನಿಗದಿಪಡಿಸಿ ಕೃಷಿ ಭೂಮಿಯನ್ನು ಮಾರಾಟ ಮಾಡಲು ಹೊರಟಿದೆ. ಇದು ಕೇವಲ ರಿಯಲ್ ಎಸ್ಟೇಟ್ ದಲ್ಲಾಳಿ ಕೆಲಸ. 15 ವರ್ಷಗಳಲ್ಲಿ ಈ ಯೋಜನೆಯಿಂದ ₹33,000 ಕೋಟಿ ಆದಾಯ ಗಳಿಸುವ ಲೆಕ್ಕಾಚಾರವನ್ನು ಸರ್ಕಾರ ಹಾಕಿಕೊಂಡಿದೆ ಎಂದರೆ, ಇದು ಸಾರ್ವಜನಿಕ ಕಲ್ಯಾಣವೋ ಅಥವಾ ಸರ್ಕಾರಿ ರಿಯಲ್ ಎಸ್ಟೇಟ್ ವ್ಯವಹಾರವೋ?” ಎಂದು ಪ್ರಶ್ನಿಸಿದ್ದರು. ಅಲ್ಲದೆ, ರೈತರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಭೂಮಿ ಕಿತ್ತುಕೊಂಡರೆ ತಾವು ರೈತರ ಪರವಾಗಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಡಿಕೆಶಿ ತಿರುಗೇಟು: ‘ಬಟ್ಟೆ ಹರಿದರೂ ಯೋಜನೆ ಮಾಡಿಯೇ ಸಿದ್ಧ’
ವಿರೋಧ ಪಕ್ಷಗಳ ತೀವ್ರ ಆಕ್ಷೇಪ ಮತ್ತು ರೈತರ ಪ್ರತಿಭಟನೆಗಳ ನಡುವೆಯೂ ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಈ ಯೋಜನೆ ಮುಖ್ಯವಾಗಿದೆ. ಭೂಮಿ ಬಿಟ್ಟುಕೊಡುವಂತೆ ನಾನೇ ಖುದ್ದಾಗಿ ರೈತರ ಮನವೊಲಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ರೈತರು ನನ್ನ ಮೇಲೆ ಕಲ್ಲೆಸೆದರೂ, ನನ್ನ ಬಟ್ಟೆ ಹರಿದರೂ ಸಹಿಸಿಕೊಂಡು ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮಾಡಿಯೇ ಸಿದ್ಧ” ಎಂದು ಹೇಳಿಕೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಿರುವ ಈ ಬಿಡದಿ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಸದ್ಯಕ್ಕೆ ಕರ್ನಾಟಕದ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
BREAKING: ಆಂಧ್ರದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ‘ಸಿಎಂ ಬಂಪರ್ ಆಫರ್’: 3, 4ನೇ ಮಗುವಿಗೆ ‘ನಗದು ಬಹುಮಾನ’ ಘೋಷಣೆ!








