ಶಿವಮೊಗ್ಗ: ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಸಬಲತೆ ಸಾಧ್ಯ. ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕ ತೆಗೆದವರಿಗೆ ವಿಶೇಷ ಬಹುಮಾನ ನೀಡುವುದಾಗಿ ಸಾಗರ ತಾಲ್ಲೂಕು ಕರವೇ ಅಧ್ಯಕ್ಷ ಮನೋಜ್ ಕುಗ್ವೆ ಘೋಷಣೆ ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕುಗ್ವೆ ಸರ್ಕಾರಿ ಶಾಲೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಶಾಲಾ ಆವರಣದಲ್ಲಿ ಗಿಡ ನೆಟ್ಟು, ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು..
ನಾರಾಯಣ ಗೌಡರ ಹೋರಾಟದ ಹಾದಿ ಪ್ರೇರಣೆ
ಕರವೇ ರಾಜ್ಯ ಅಧ್ಯಕ್ಷರಾದ ನಾರಾಯಣ ಗೌಡರು ಕನ್ನಡ, ನೆಲ, ಜಲ ಮತ್ತು ಭಾಷೆಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳ ಕಡ್ಡಾಯ ಅನುಷ್ಠಾನಕ್ಕಾಗಿ ನಡೆದ ಹೋರಾಟ, ಬೆಳಗಾವಿ ಗಡಿ ಸಮಸ್ಯೆ ಹಾಗೂ ಕಾವೇರಿ ಜಲವಿವಾದದಂತಹ ಪ್ರಮುಖ ಹೋರಾಟಗಳಲ್ಲಿ ಅವರು ಹಲವಾರು ಬಾರಿ ಜೈಲು ವಾಸವನ್ನು ಅನುಭವಿಸಿದ್ದಾರೆ. ಅವರ ಈ ಹೋರಾಟದ ಹಾದಿ ನಮ್ಮ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ದೊಡ್ಡ ಪ್ರೇರಣೆಯಾಗಿದೆ ಎಂದು ಮನೋಜ್ ಕುಗ್ವೆ ಸ್ಮರಿಸಿದರು.
ಸಾಮಾಜಿಕ ಕಳಕಳಿಯ ಕರವೇ
ಸಂಘಟನೆಯ ಮೂಲಕ ಕೇವಲ ಹೋರಾಟಗಳಷ್ಟೇ ಅಲ್ಲದೆ, ಸಮಾಜದ ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕರವೇ ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮ ಗಳಿಕೆಯ ಒಂದು ಭಾಗವನ್ನು ಇಂತಹ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಗರದ ಬಿಎಸ್ಎನ್ಎಲ್ ಮತ್ತು ಪೋಸ್ಟ್ ಆಫೀಸ್‌ನಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ಕನ್ನಡ ಭಾಷಾ ಬಳಕೆಗೆ ಕರವೇ ನಡೆಸಿದ ಯಶಸ್ವಿ ಹೋರಾಟ ಹಾಗೂ ಪವಿತ್ರ ವನದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕರವೇ ನೀಡಿದ ಕೊಡುಗೆಯನ್ನು ಅವರು ನೆನಪಿಸಿಕೊಂಡರು.
ಸಾಧಕಿ ದೀಕ್ಷಾಗೆ ಮುಕ್ತಕಂಠದ ಶ್ಲಾಘನೆ
ಇದೇ ವೇಳೆ ಇತ್ತೀಚೆಗೆ ಎಂಟನೇ ತರಗತಿಯ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಸಾಧನೆಗೈದ ಕುಗ್ವೆ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿನಿ ದೀಕ್ಷಾ ಅವರ ಸಾಧನೆಯನ್ನು ಮನೋಜ್ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದ ಅವರು, ಮುಂಬರುವ ದಿನಗಳಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸಂಘಟನೆಯ ವತಿಯಿಂದ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ, ಚಾರ್ವಾಕ ಪತ್ರಿಕೆ ಸಂಪಾದಕ ಹಾಗೂವಕೀಲರಾದಂತ ಹೆಚ್.ಬಿ ರಾಘವೇಂದ್ರ, ಸಾಗರ ಕರವೇ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶ್ಯಾಮಲಾ, ಮಾಜಿ ತಾಲ್ಲೂಕು ಪಂಚಾಯ್ಯಿ ಮಾಜಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಎಸ್ ಡಿ ಎಂ ಸಿಸಿ ಅಧ್ಯಕ್ಷರಾದ ನಿರಂಜನ, ಜಯಲಕ್ಷ್ಮಿ ಮಂಜಪ್ಪ, ಖಂಡಿಕಾ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾರ ನಾಗರಾಜ್ ಗೌಡ್ರು, ನಾರಾಯಣ್ ಕೆ.ಆರ್, ಕುರಿ ಅಣ್ಣಪ್ಪ, ಕೆಳದಿ ರಾಮಚಂದ್ರ, ಜನಾರ್ದನ ಬಿ.ಟಿ, ವಸಂತ್ ಕುಗ್ವೆ, ಕನ್ನಪ್ಪ ಬಾಣದ, ಅಣ್ಣಪ್ಪ ಕೆಳದಿಪುರ, ಸಂತೀಶ್ ಅಂಗಡಿ, ಕುಗ್ವೆ ಶ್ರೀ ಯುವಕ ಸಂಘದ ಅಧ್ಯಕ್ಷರಾದ ನಾಗರಾಜ್, ಗಣಪತಿ ಪಿಆರ್ ಪಡವಗೋಡು, ಮಹೇಶ್, ದೇವರಾಜ್, ರಾಜೇಶ್ ಕುಗ್ವ, ನಾಗರಾಜ್ ಬಂಡಿ, ತೋಸಿಫ್ ಸಾಗರ, ಹಾಲಪ್ಪ ತೊರಗೋಡು, ರವಿ ಶಿವಮೊಗ್ಗ, ಶಾಲಾ ಮುಖ್ಯೋಪಾಧ್ಯಾಯರಾದ ತೇರೇಸಾ, ಪತ್ರಕರ್ತರ ರಾಘವೇಂದ್ರ ತಾಳಗುಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.








