ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬಗಳು ಕೇವಲ ಫ್ಲೆಕ್ಸ್ ಬ್ಯಾನರ್‌ಗಳಿಗೆ ಹಾಗೂ ಫ್ಯಾಷನ್‌ಗೆ ಸೀಮಿತವಾಗುತ್ತಿರುವು ದರ ನಡುವೆ, ಕರ್ನಾಟಕ ರಕ್ಷಣಾ ವೇದಿಕೆಯು ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಯಕರ ಜನ್ಮದಿನ ಆಚರಿಸುತ್ತಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಹಿರಿಯ ವಕೀಲರು ಹಾಗೂ ಚಾರ್ಚಕ ಪತ್ರಿಕೆಯ ಸಂಪಾದಕ, ಡಿಎಂಪಿಸಿ ಅಧ್ಯಕ್ಷರಾದ ಹೆಚ್.ಬಿ. ರಾಘವೇಂದ್ರ ಶ್ಲಾಘಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕುಗ್ವೆಯ ಸರ್ಕಾರಿ ಶಾಲೆಯಲ್ಲಿ ಕರವೇ ರಾಜ್ಯಾಧ್ಯಕ್ಷರಾದಂತ ಟಿ.ಎ ನಾರಾಯಣಗೌಡ ಅವರ 60ನೇ ಹುಟ್ಟಿದ ಹಬ್ಬದ ಪ್ರಯುಕ್ತ ಶಾಲಾ ಆವರಣದಲ್ಲಿ ಗಿಡ ನೆಟ್ಟು, ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು.
ಬದ್ಧತೆಯ ಹೋರಾಟದ ಇತಿಹಾಸ
ಜಗತ್ತಿನಲ್ಲಿ ಲಕ್ಷಾಂತರ ಜನರ ಬದುಕಿಗೆ ಬೆಳಕಾದ ಯೇಸು ಕ್ರಿಸ್ತ, ಬುದ್ಧ, ಪೈಗಂಬರ್, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿಯವರಂತಹ ಮಹಾಪುರುಷರ ಆದರ್ಶಗಳನ್ನು ಸಮಾಜದಲ್ಲಿ ವಿಸ್ತರಿಸುವ ಉದ್ದೇಶದಿಂದ ಹುಟ್ಟುಹಬ್ಬದ ಆಚರಣೆಗಳು ಆರಂಭವಾದವು ಎಂದ ಅವರು, ಕರವೇ ಸಂಘಟನೆಯು ಕೂಡ ತನ್ನ ಬದ್ಧತೆಯ ಹೋರಾಟಗಳ ಮೂಲಕ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಬೆಂಗಳೂರು ಹಾಗೂ ಬೆಳಗಾವಿಯಂತಹ ನಗರಗಳಲ್ಲಿ ಹೊರರಾಜ್ಯಗಳಿಂದ ವಲಸೆ ಬಂದವರು ಕನ್ನಡ ಭಾಷೆಯ ಮೇಲೆ ದಾದಾಗಿರಿ ನಡೆಸಿದಾಗ ಮತ್ತು ಹಿಂದಿ ಹೇರಿಕೆಯ ಸಂಚುಗಳು ನಡೆದಾಗ ಕರವೇ ದಿಟ್ಟವಾಗಿ ಪ್ರತಿಭಟಿಸಿದೆ. ಅದರಲ್ಲೂ ವಿಶೇಷವಾಗಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕಾರ್ಯಕರ್ತರು ಕನ್ನಡ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶಿಸಿ ದಾಂಧಲೆ ಮಾಡಲು ಯತ್ನಿಸಿದಾಗ, ಕರವೇ ಕಾರ್ಯಕರ್ತರು ವೀರೋಚಿತವಾಗಿ ಅವರನ್ನು ಹಿಮ್ಮೆಟ್ಟಿಸಿದ ಇತಿಹಾಸವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಕೇವಲ ನವೆಂಬರ್‌ಗೆ ಸೀಮಿತವಾಗದಿರಲಿ
ಕನ್ನಡಪರ ಸಂಘಟನೆಗಳು ಅಂದರೆ ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಬಾವುಟ ಹಿಡಿದು ಸಂಭ್ರಮಿಸುವುದಕ್ಕೆ ಸೀಮಿತವಾಗಬಾರದು. ಕನ್ನಡ ನೆಲದ ಬಹುಮುಖಿ ಬಿಕ್ಕಟ್ಟುಗಳಾದ ನಿರುದ್ಯೋಗ, ಕೃಷಿಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಸಂಘಟನೆಗಳ ಕರ್ತವ್ಯವಾಗಿದೆ. ಸರ್ಕಾರವು ಇಂಗ್ಲಿಷ್ ಮತ್ತು ಕನ್ನಡ ದ್ವಿಭಾಷಾ ನೀತಿಯನ್ನು ತರಲು ಹೊರಟಾಗ ನಾರಾಯಣ ಗೌಡರ ನೇತೃತ್ವದ ಒಕ್ಕೂಟ ನಡೆಸಿದ ದಿಟ್ಟ ಹೋರಾಟದ ಫಲವಾಗಿಯೇ ಸರ್ಕಾರ ತನ್ನ ತೀರ್ಮಾನವನ್ನು ಬದಲಿಸಬೇಕಾಯಿತು. ಆಳುವ ಸರ್ಕಾರದ ಗಮನ ಸೆಳೆಯುವ ತಾಕತ್ತು ಇಂತಹ ಸಂಘಟನೆಗಳಿಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಗರ ತಾಲೂಕಿನ ಸಮಸ್ಯೆಗಳತ್ತ ಗಮನಹರಿಸಿ
ಇದೇ ಸಂದರ್ಭದಲ್ಲಿ ಸ್ಥಳೀಯ ಕರವೇ ಘಟಕಕ್ಕೆ ಸಲಹೆ ನೀಡಿದ ಹೆಚ್.ಬಿ. ರಾಘವೇಂದ್ರ ಅವರು, ಸಾಗರ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿಯಾದ ಶುಂಠಿ, ಅನಾನಸ್ ಹಾಗೂ ಅಡಿಕೆ ತೋಟಗಳಿಂದಾಗಿ ಪರಿಸರ ನಾಶವಾಗುತ್ತಿದೆ. ಬಗರ್ ಹುಕಂ ಸಮಸ್ಯೆಗಳು ಜೀವಂತವಾಗಿವೆ. ತಾಲೂಕಿನಲ್ಲಿ ‘ಸಾಯಿ ಗಾರ್ಮೆಂಟ್ಸ್’ ನಂತಹ ಒಂದೇ ಒಂದು ಸಂಸ್ಥೆಯನ್ನು ಬಿಟ್ಟರೆ ಉದ್ಯೋಗ ನೀಡುವ ಯಾವುದೇ ಸಣ್ಣ ಕೈಗಾರಿಕೆಗಳಿಲ್ಲ. ಹೀಗಾಗಿ ಯುವಜನತೆ ಕೇವಲ ಭೂಮಿಯನ್ನೇ ನಂಬಿ ಬದುಕುವಂತಾಗಿದ್ದು, ನಿರುದ್ಯೋಗ ಹೆಚ್ಚುತ್ತಿದೆ. ಕರವೇ ಕಾರ್ಯಕರ್ತರು ಕೇವಲ ಬೀದಿಗಿಳಿದು ಹೋರಾಡುವುದಷ್ಟೇ ಅಲ್ಲದೆ, ನಿಯೋಗಗಳ ಮೂಲಕ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಸ್ಥಳೀಯ ಜ್ವಲಂತ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆದು ಸುಸ್ಥಿರ ಬದಲಾವಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ, ಸಾಗರ ತಾಲ್ಲೂಕು ಕರವೇ ಅಧ್ಯಕ್ಷ ಮನೋಜ್ ಕುಗ್ವೆ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಶ್ಯಾಮಲಾ, ಮಾಜಿ ತಾಲ್ಲೂಕು ಪಂಚಾಯ್ಯಿ ಮಾಜಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಎಸ್ ಡಿ ಎಂ ಸಿಸಿ ಅಧ್ಯಕ್ಷರಾದ ನಿರಂಜನ, ಜಯಲಕ್ಷ್ಮಿ ಮಂಜಪ್ಪ, ಖಂಡಿಕಾ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾರ ನಾಗರಾಜ್ ಗೌಡ್ರು, ನಾರಾಯಣ್ ಕೆ.ಆರ್, ಕುರಿ ಅಣ್ಣಪ್ಪ, ಕೆಳದಿ ರಾಮಚಂದ್ರ, ಜನಾರ್ದನ ಬಿ.ಟಿ, ವಸಂತ್ ಕುಗ್ವೆ, ಕನ್ನಪ್ಪ ಬಾಣದ, ಅಣ್ಣಪ್ಪ ಕೆಳದಿಪುರ, ಸಂತೀಶ್ ಅಂಗಡಿ, ರವಿ ಶಿವಮೊಗ್ಗ, ಶಾಲಾ ಮುಖ್ಯೋಪಾಧ್ಯಾಯರಾದ ತೇರೇಸಾ, ಪತ್ರಕರ್ತರ ರಾಘವೇಂದ್ರ ತಾಳಗುಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.








