ನವದೆಹಲಿ: ಮುಂಬರುವ ನೀಟ್ (NEET-UG) ಮರುಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ವಂಚನೆಗಳು ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ದೇಶಾದ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ಟೆಲಿಗ್ರಾಮ್ (Telegram) ಬಳಕೆಯ ಮೇಲೆ ಜೂನ್ 22ರವರೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಜೂನ್ 21 ರಂದು ನೀಟ್ ಮರುಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಆದೇಶ ಹೊರಡಿಸಿದೆ.
ನಿಷೇಧಕ್ಕೆ ಮುಖ್ಯ ಕಾರಣಗಳೇನು?
ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಾಗೂ ವಂಚನೆ: ನೀಟ್ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದಾಗಿ ನಕಲಿ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಜಾಲಗಳನ್ನು ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗಷ್ಟೇ ಪತ್ತೆಹಚ್ಚಿದ್ದರು.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯಕ್ಕೆ ಬ್ರೇಕ್: ಹಳೆಯ ಸಂದೇಶಗಳ ಸಮಯವನ್ನು (Timestamp) ಬದಲಾಯಿಸದೆ, ಸುಳ್ಳು “ಪ್ರಶ್ನೆ ಪತ್ರಿಕೆ ಲೀಕ್” ಮಾಹಿತಿಯನ್ನು ಸೃಷ್ಟಿಸಲು ಟೆಲಿಗ್ರಾಮ್‌ನ ‘ಮೆಸೇಜ್ ಎಡಿಟಿಂಗ್’ ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಇದನ್ನು ತಡೆಯಲು ಜೂನ್ 30ರವರೆಗೆ ಈ ಫೀಚರ್ ಅನ್ನು ಸಹ ಭಾರತದಲ್ಲಿ ನಿರ್ಬಂಧಿಸಲಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಸ್ಪಷ್ಟನೆ:
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA), “ವಿದ್ಯಾರ್ಥಿಗಳನ್ನು ವಂಚಿಸುವ ಮತ್ತು ಸುಳ್ಳು ವದಂತಿಗಳನ್ನು ಹಬ್ಬಿಸುವ ಜಾಲವನ್ನು ಧ್ವಂಸಗೊಳಿಸಲು ಈ ಕ್ರಮ ಅನಿವಾರ್ಯವಾಗಿತ್ತು. ಇದರಿಂದ ಸಾಮಾನ್ಯ ಬಳಕೆದಾರರಿಗೆ ತಾತ್ಕಾಲಿಕ ತೊಂದರೆಯಾಗಬಹುದು, ಆದರೆ ಪರೀಕ್ಷೆಯ ಪಾರದರ್ಶಕತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ತಿಳಿಸಿದೆ.
ಜೂನ್ 21ರಂದು ನಿಗದಿತ ವೇಳಾಪಟ್ಟಿಯಂತೆಯೇ ನೀಟ್ ಮರುಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಕೇವಲ ಅಧಿಕೃತ ವೆಬ್‌ಸೈಟ್ ಮಾಹಿತಿಗಳನ್ನು ಮಾತ್ರ ನಂಬುವಂತೆ ಎನ್‌ಟಿಎ ಮನವಿ ಮಾಡಿದೆ.
Telegram access restricted in India for re- NEET following recommendations of NTA
"Ministry of Electronics and Information Technology has issued notification a direction under Section 69 A of the Information Technology Act, 2000, restricting access to the Telegram platform in… pic.twitter.com/3TzJepOoej
— ANI (@ANI) June 16, 2026







