ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಮುಂಬರುವ ವಿಶೇಷ ಲೋಕ ಅದಾಲತ್ ಹಿನ್ನೆಲೆಯಲ್ಲಿ ಮೇ-2026 ಕ್ಕಿಂತ ಮೊದಲು ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2022 ರ ಅವಧಿಯಲ್ಲಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ತಿಳಿಸಿದ್ದಾರೆ.
ಈ ವಿಶೇಷ ರಿಯಾಯಿತಿಯು ಸೀಮಿತ ಅವಧಿಗೆ ಮಾತ್ರ ಅನ್ವಯಿಸಲಿದ್ದು, 21.06.2026 ರಿಂದ 10.07.2026 ರವರೆಗೆ (ಕೇವಲ 20 ದಿನಗಳು ಮಾತ್ರ) ಇರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ದಾಖಲಾಗಿರುವ ಅರ್ಹ ಬಾಕಿ ಸಂಚಾರ ಇ-ಚಲನ್ ಮತ್ತು ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಮಾತ್ರ ಈ ಶೇ.50 ರಿಯಾಯಿತಿ ಅನ್ವಯಿಸುತ್ತದೆ.
ದಂಡ ಪಾವತಿಸುವ ವಿಧಾನ:
ಸಾರ್ವಜನಿಕರು ತಮ್ಮ ವಾಹನಗಳ ಬಾಕಿ ದಂಡವನ್ನು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಕರ್ನಾಟಕ ಒನ್ ಕೇಂದ್ರಗಳು, ನಗರದ ಸಂಚಾರಿ ಪೊಲೀಸ್ ಠಾಣೆ, ಅಧಿಕೃತ ಆನ್ಲೈನ್ ಪೋರ್ಟಲ್ಗಳು (ಪರಿವಾಹನ ಪೋರ್ಟಲ್/ಕೆ.ಎಸ್.ಪಿ ಆಪ್), ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಮೂಲಕ ಪಾವತಿಸಬಹುದಾಗಿದೆ.
ನ್ಯಾಯಾಲಯಗಳಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ಸಂಚಾರ ಪ್ರಕರಣಗಳನ್ನು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸಲು ಈ ಸುವರ್ಣಾವಕಾಶವನ್ನು ನೀಡಲಾಗಿದೆ.
ಸಾರ್ವಜನಿಕರು ಹಾಗೂ ವಾಹನ ಸವಾರರು ಯಾವುದೇ ಕಾನೂನು ಪ್ರಕ್ರಿಯೆಗಳ ಜಂಜಾಟವಿಲ್ಲದೆ, ಈ ರಿಯಾಯಿತಿಯ ಲಾಭವನ್ನು ಪಡೆದು ತಮ್ಮ ಬಾಕಿ ದಂಡವನ್ನು ಪಾವತಿಸಿ ಸಹಕರಿಸಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳು, ಸಮೀಪದ ಸಂಚಾರಿ ಪೊಲೀಸ್ ಠಾಣೆ ಅಥವಾ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








