ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಟಿ20 ಅಂತಾರಾಷ್ಟ್ರೀಯ (T20I) ತಂಡದ ನಾಯಕತ್ವದಲ್ಲಿ ಭಾರಿ ಬದಲಾವಣೆಯಾಗಿದ್ದು, ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲು ಬಿಸಿಸಿಐ (BCCI) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನವು ತಂಡದ ಆಡಳಿತ ಮಂಡಳಿಯನ್ನು ಚಿಂತೆಗೀಡು ಮಾಡಿದೆ. 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪ್ರಶಸ್ತಿ ಉಳಿಸಿಕೊಂಡಿದ್ದರೂ, ಸೂರ್ಯಕುಮಾರ್ ವೈಯಕ್ತಿಕವಾಗಿ 9 ಇನಿಂಗ್ಸ್‌ಗಳಲ್ಲಿ ಕೇವಲ 242 ರನ್‌ಗಳನ್ನು ಮಾತ್ರ ಗಳಿಸಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ 2026ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಸೂರ್ಯಕುಮಾರ್, 13 ಇನಿಂಗ್ಸ್‌ಗಳಲ್ಲಿ ಕೇವಲ 270 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾದರು. ಈ ವೈಫಲ್ಯ ಅವರ ನಾಯಕತ್ವ ಸ್ಥಾನಕ್ಕೆ ಕುತ್ತು ತಂದಿದೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಆ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡವನ್ನು ಸಜ್ಜುಗೊಳಿಸುವ ಉದ್ದೇಶದಿಂದ, ಬಿಸಿಸಿಐ ಭವಿಷ್ಯದ ನಾಯಕನ ಹುಡುಕಾಟದಲ್ಲಿದೆ.








