ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) 2026ನೇ ಸಾಲಿನ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ.
ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4 ರ ನೌಕರರ ಪರಸ್ಪರ/ಸಾಮಾನ್ಯ ವರ್ಗಾವಣೆ ಆದೇಶವನ್ನು (ಪತಿ-ಪತ್ನಿ ಪ್ರಕರಣ, ಶೇಕಡಾ 40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ ಪ್ರಕರಣಗಳು ಸೇರಿದಂತೆ) ಅಧಿಕೃತ ವೆಬ್‌ಸೈಟ್ ಆದ ksrtc.karnataka.gov.in ನಲ್ಲಿ ಜೂನ್ 04, 2026 ರಂದು ಪ್ರಕಟಿಸಲಾಗಿದೆ. ಈ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಜನವರಿ 01, 2026 ರಿಂದ ಫೆಬ್ರವರಿ 28, 2026 ರವರೆಗೆ ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು.
ಜೂನ್ 8 ಕ್ಕೆ ಬಿಡುಗಡೆ:
ಪರಸ್ಪರ ವರ್ಗಾವಣೆಗೊಂಡ ನೌಕರರನ್ನು ಜೂನ್ 08, 2026 ರಂದು ವರ್ಗಾವಣೆಗೊಂಡ ವಿಭಾಗಕ್ಕೆ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೂನ್ 11 ರಿಂದ ಆನ್ ಲೈನ್ ಕೌನ್ಸೆಲಿಂಗ್:
ಸಾಮಾನ್ಯ ವರ್ಗಾವಣೆಗೊಂಡ ನೌಕರರಿಗೆ ಕೌನ್ಸೆಲಿಂಗ್ ಮೂಲಕ ಕಚೇರಿ ಅಥವಾ ಘಟಕಗಳ ಹಂಚಿಕೆ ಮಾಡಲಾಗುತ್ತದೆ. ಈ ಕೌನ್ಸೆಲಿಂಗ್ ಪ್ರಕ್ರಿಯೆಯು www.ksrtc.org/transfer ವೆಬ್‌ಸೈಟ್ ನಲ್ಲಿ ಜೂನ್ 11, 2026 ರಿಂದ ಜೂನ್ 17, 2026 ರವರೆಗೆ ಆನ್‌ಲೈನ್ ಮೂಲಕ ಜರುಗಲಿದೆ.
ಕೌನ್ಸೆಲಿಂಗ್ ವೇಳೆ ನೌಕರರು ಒಮ್ಮೆ ಆದ್ಯತೆ (Preference) ಸಲ್ಲಿಸಿದ ನಂತರ ಅದರಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ.
ಈ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಮೂಲಕವೇ ನಡೆಯುವುದರಿಂದ, ಲಿಖಿತ ಅರ್ಜಿಗಳ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಯುತ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.









