ಬೆಂಗಳೂರು: ರಾಜ್ಯದ ವಿಕಲಚೇತನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳು ಈ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಮುಖ ಯೋಜನೆಗಳು ಮತ್ತು ಅವುಗಳ ವಿವರಗಳು ಈ ಕೆಳಗಿನಂತಿವೆ:
1. ಶೈಕ್ಷಣಿಕ ಪ್ರೋತ್ಸಾಹ ಮತ್ತು ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನ: 1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ SSP ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ: ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಶುಲ್ಕ ಮರುಪಾವತಿ: ಎಸ್.ಎಸ್.ಎಲ್.ಸಿ ನಂತರದ ಉನ್ನತ, ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಹಾಗೂ ಗ್ರಂಥಾಲಯ ಶುಲ್ಕಗಳನ್ನು ನಿಯಮಾನುಸಾರ ಮರುಪಾವತಿಸಲಾಗುತ್ತದೆ.
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಹಾಗೂ ಬ್ರೈಲ್ ಕಿಟ್: ಉನ್ನತ ಶಿಕ್ಷಣ ಪಡೆಯುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಹಾಗೂ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್ ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
2. ಸ್ವಯಂ ಉದ್ಯೋಗ ಮತ್ತು ಆರ್ಥಿಕ ನೆರವು
ಆಧಾರ ಯೋಜನೆ: ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಾಲದ ಜೊತೆಗೆ ಇಲಾಖೆಯಿಂದ ಶೇ. 50 ರಷ್ಟು (ಗರಿಷ್ಠ ಮಿತಿ ಇರಲಿದೆ) ಸಹಾಯಧನ ನೀಡಲಾಗುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೊಲಿಗೆ ಯಂತ್ರಗಳ ವಿತರಣೆ: ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ರಾಜ್ಯಾದ್ಯಂತ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆ ಜಾರಿಯಲ್ಲಿದೆ.
3. ಸಾಮಾಜಿಕ ಮತ್ತು ವೈದ್ಯಕೀಯ ಭದ್ರತೆ
ವಿವಾಹ ಪ್ರೋತ್ಸಾಹ ಧನ ಯೋಜನೆ: ವಿಕಲಚೇತನ ಯುವಕ/ಯುವತಿಯರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾದಲ್ಲಿ, ಅವರಿಗೆ ನಿರಂತರ ಮಾಸಿಕ ಆದಾಯ ಸಿಗುವಂತೆ ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ ರೂ. 50,000/- ಗಳನ್ನು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಲಾಗುತ್ತದೆ.
ಅಂಧ ಮಹಿಳೆಯರ ಮಕ್ಕಳ ಆರೈಕೆ ಭತ್ಯೆ: ಅಂಧ ಮಹಿಳೆಯರಿಗೆ ಜನಿಸುವ ಗರಿಷ್ಠ ಇಬ್ಬರು ಮಕ್ಕಳಿಗೆ 5 ವರ್ಷಗಳ ಅವಧಿಗೆ ಮಾಸಿಕ ರೂ. 2,000/- ಗಳಂತೆ ಆರೈಕೆ ಭತ್ಯೆ ನೀಡಲಾಗುತ್ತದೆ.
ನಿರಾಮಯ ಆರೋಗ್ಯ ವಿಮಾ ಯೋಜನೆ: ಬುದ್ಧಿಮಾಂದ್ಯ, ಸೆರೆಬ್ರಲ್ ಪಾಲ್ಸಿ, ಆಟಿಸಂ ಹಾಗೂ ಬಹುವಿಧ ವಿಕಲಚೇತನ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವ್ಯಕ್ತಿಗಳಿಗೆ ವರ್ಷಕ್ಕೆ ರೂ. 1.00 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ ಸಿಗುವ ವಿಮಾ ಯೋಜನೆ ಇದಾಗಿದೆ. ಇದರ ಪ್ರೀಮಿಯಂ ಮೊತ್ತ ರೂ. 250/- ಅನ್ನು ಸರ್ಕಾರವೇ ನ್ಯಾಷನಲ್ ಟ್ರಸ್ಟ್ ಸಂಸ್ಥೆಗೆ ಪಾವತಿಸುತ್ತದೆ.
ವೈದ್ಯಕೀಯ ಪರಿಹಾರ ನಿಧಿ: ಅಂಗವಿಕಲತೆ ನಿವಾರಣೆಯ ಶಸ್ತ್ರಚಿಕಿತ್ಸೆಗಾಗಿ ಸರ್ಕಾರಿ ಹಾಗೂ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೂ. 1.00 ಲಕ್ಷದವರೆಗೆ ನೆರವು ನೀಡಲಾಗುತ್ತದೆ.
ಆರೈಕೆದಾರರ ಭತ್ಯೆ: ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಟ್ರೋಫಿ, ಪಾರ್ಕಿಸನ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ 2024-25ನೇ ಸಾಲಿನಿಂದ ಪ್ರತಿ ಮಾಹೆ ರೂ. 1,000/- ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
4. ಸಾಧನ ಸಲಕರಣೆಗಳು ಮತ್ತು ವಾಹನ ಸೌಲಭ್ಯ
ಉಚಿತ ಸಾಧನ ಸಲಕರಣೆಗಳು: ಗ್ರಾಮೀಣ ಭಾಗದ (ವಾರ್ಷಿಕ ಆದಾಯ ರೂ. 11,500/- ಒಳಗಿನ) ಮತ್ತು ನಗರ ಭಾಗದ (ವಾರ್ಷಿಕ ಆದಾಯ ರೂ. 24,000/- ಒಳಗಿನ) ವಿಕಲಚೇತನರಿಗೆ ಕ್ಯಾಲಿಪರ್ಸ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್, ಶ್ರವಣ ಸಾಧನ ಮುಂತಾದವುಗಳನ್ನು ರೂ. 15,000/- ಗಳ ಮಿತಿಯೊಳಗೆ ಉಚಿತವಾಗಿ ನೀಡಲಾಗುತ್ತದೆ.
ಯಾಂತ್ರೀಕೃತ ದ್ವಿಚಕ್ರ ವಾಹನ: 20 ರಿಂದ 60 ವರ್ಷ ವಯೋಮಾನದ, ವಾರ್ಷಿಕ ಆದಾಯ ರೂ. 2.00 ಲಕ್ಷಕ್ಕಿಂತ ಕಡಿಮೆ ಇರುವ ತೀವ್ರತರದ ದ್ಹೈಹಿಕ ವಿಕಲಚೇತನರಿಗೆ ಜೀವಿತಾವಧಿಯಲ್ಲಿ ಒಂದು ಬಾರಿ ಯಾಂತ್ರೀಕೃತ ದ್ವಿಚಕ್ರ ವಾಹನ ಒದಗಿಸಲಾಗುತ್ತದೆ.
ಬ್ಯಾಟರಿ ಚಾಲಿತ ವೀಲ್ ಚೇರ್: 2023-24ನೇ ಸಾಲಿನಿಂದ ತೀವ್ರ ದ್ಹೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್‌ಗಳನ್ನು ವಿತರಿಸಲಾಗುತ್ತಿದೆ.
5. ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಳ
ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪುನರ್ವಸತಿ ಕಾರ್ಯಕರ್ತರಿಗೆ ಪ್ರಸ್ತುತ ಈ ಕೆಳಗಿನಂತೆ ಗೌರವಧನ ಪಾವತಿಸಲಾಗುತ್ತಿದೆ:
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (MRW): ರೂ. 9,000/-
ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (VRW): ರೂ. 15,000/-
ನಗರ ಪುನರ್ವಸತಿ ಕಾರ್ಯಕರ್ತರು (URW): ರೂ. 9,000/-
ಜಿಲ್ಲಾ ಸಂಯೋಜಕರು: ರೂ. 19,000/-
ರಾಜ್ಯ ಸಂಯೋಜಕರು: ರೂ. 38,000/-
(ಈ ಕಾರ್ಯಕರ್ತರು ನಿಧನ ಹೊಂದಿದಲ್ಲಿ ಅವರ ಕುಟುಂಬಕ್ಕೆ ರೂ. 1.00 ಲಕ್ಷ ಮರಣ ಪರಿಹಾರ ನಿಧಿ ನೀಡುವ ಯೋಜನೆಯೂ ಇದೆ).
6. ವಿಶೇಷ ತರಬೇತಿ ಮತ್ತು ವಸತಿ ನಿಲಯಗಳು
ಸ್ಪರ್ಧಾ ಚೇತನ: ಐ.ಎ.ಎಸ್./ಕೆ.ಎ.ಎಸ್. ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಕಲಚೇತನ ಅಭ್ಯರ್ಥಿಗಳಿಗೆ ಉಚಿತ ಪೂರ್ವ ಸಿದ್ಧತಾ ತರಬೇತಿ ನೀಡಲಾಗುತ್ತದೆ.
ವಿಶೇಷ ಶಾಲೆಗಳು: ಬುದ್ಧಿಮಾಂದ್ಯ, ಆಟಿಸಂ, ದೃಷ್ಟಿದೋಷ, ಶ್ರವಣದೋಷವುಳ್ಳ ಮಕ್ಕಳಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಒಟ್ಟು 164 ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ.
ನಿರಾಶ್ರಿತ ಬೌದ್ಧಿಕ ವಿಕಲಚೇತನರ ಅನುಪಾಲನಾ ಗೃಹ: ಬೆಂಗಳೂರು ನಗರ, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗಾಗಿ 4 ಅನುಪಾಲನಾ ಗೃಹಗಳನ್ನು ಪ್ರಾರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಮಾಹಿತಿಗಾಗಿ ಸಂಪರ್ಕಿಸಿ:
ಯೋಜನೆಗಳ ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಮಾಹಿತಿ ಸಲಹಾ ಕೇಂದ್ರ ಹಾಗೂ ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಕಚೇರಿಗಳಲ್ಲಿ ವಿಕಲಚೇತನರ ಸಹಾಯವಾಣಿ/ಮಾಹಿತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಅರ್ಹರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.








