ಜಗತ್ಯಾಲ (ತೆಲಂಗಾಣ): ಚಲಿಸುತ್ತಿದ್ದ ಕಾರಿನಲ್ಲೇ ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದರೇ ಎಂಬ ಶಂಕೆಯ ನಡುವೆ, ನಿಯಂತ್ರಣ ತಪ್ಪಿದ ಮಹೀಂದ್ರಾ ಥಾರ್ ಕಾರೊಂದು ಬಾವಿಗೆ ಬಿದ್ದ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಜಗತ್ಯಾಲ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾರಿನಲ್ಲಿದ್ದ ಮತ್ತಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಗತ್ಯಾಲ ಪಟ್ಟಣದ ನಿವಾಸಿ ದಾಸರಿ ಅರುಣ್ (28) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಅರುಣ್ ಸ್ನೇಹಿತರಾದ ಅಶ್ವಿನ್ ಮತ್ತು ನಿವೇಶ್ ಅವರನ್ನು ಸ್ಥಳೀಯರು ರಕ್ಷಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೂವರೂ ಸ್ನೇಹಿತರು ಮೊರಪಲ್ಲಿ ಗ್ರಾಮದಲ್ಲಿ ನಡೆದ ಗೆಳೆಯರ ಕೂಟವೊಂದರಲ್ಲಿ ಭಾಗವಹಿಸಲು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ವಾಪಸ್ ಜಗತ್ಯಾಲಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮೊರಪಲ್ಲಿ-ತಾಟಿಪಲ್ಲಿ ನಡುವಿನ ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ವಾಹನವು ದಿಢೀರನೆ ರಸ್ತೆಯಿಂದ ಪಕ್ಕಕ್ಕೆ ಸರಿದು ಹತ್ತಿರದಲ್ಲಿದ್ದ ಬಾವಿಗೆ ಬಿದ್ದಿದೆ.
ಪೊಲೀಸರ ಶಂಕೆ:
ಅಪಘಾತದ ಸಮಯದಲ್ಲಿ ಯುವಕರು ಮೊಬೈಲ್ ಫೋನ್‌ನಲ್ಲಿ ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂಬ ಮಾಹಿತಿ ಕೇಳಿಬಂದಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರು ಬಾವಿಗೆ ಬೀಳುತ್ತಿದ್ದಂತೆ ಜೋರಾದ ಶಬ್ದ ಕೇಳಿ ಸ್ಥಳೀಯರು ಧಾವಿಸಿದ್ದಾರೆ. ಈ ವೇಳೆ ವಾಸಿಂಗ್ ಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಒಬ್ಬರು ಬಾವಿಗೆ ಇಳಿದರೆ, ಉಳಿದವರು ಮೇಲಿಂದ ಸಹಾಯ ಮಾಡಿದ್ದಾರೆ. ಕಾರಿನ ಗಾಜನ್ನು ಒಡೆದು ಅಶ್ವಿನ್ ಮತ್ತು ನಿವೇಶ್ ಅವರನ್ನು ಸುರಕ್ಷಿತವಾಗಿ ಹೊರಗೆ ಎಳೆಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಆದರೆ, ಚಾಲಕನ ಸೀಟಿನಲ್ಲಿದ್ದ ಅರುಣ್ ಸ್ಟೀರಿಂಗ್ ಹಾಗೂ ಸೀಟ್ ಬೆಲ್ಟ್ ನಡುವೆ ಸಿಲುಕಿಕೊಂಡಿದ್ದರಿಂದ ಅವರನ್ನು ತಕ್ಷಣ ಹೊರತೆಗೆಯಲು ಸಾಧ್ಯವಾಗಲಿಲ್ಲ. ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಅರುಣ್ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ, ಕ್ರೇನ್ ಸಹಾಯದಿಂದ ಹೊಂಡದಲ್ಲಿದ್ದ ಥಾರ್ ಕಾರನ್ನು ಮೇಲಕ್ಕೆತ್ತಿದ್ದಾರೆ. ಈ ವೇಳೆ ಕಾರಿನೊಳಗೆ ಅರುಣ್ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬದುಕುಳಿದ ಸ್ನೇಹಿತರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.








