ನವದೆಹಲಿ: ಹಣದ ಆಸೆಗಾಗಿ ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದಂಧೆಗೆ ದೂಡುವ ಮಾನವ ಕಳ್ಳಸಾಗಣೆದಾರರಿಗೆ ಸುಪ್ರೀಂಕೋರ್ಟ್ ಈಗ ಬಿಗಿಹಗ್ಗ ಜರೆದಿದೆ. ಇಂತಹ ಕೃತ್ಯಗಳಲ್ಲಿ ಬಲಿಪಶುಗಳಾದವರು ಮಕ್ಕಳಾಗಿದ್ದರೆ, ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ ‘ಪೋಕ್ಸೋ’ (POCSO) ಕಾಯ್ದೆಯಡಿ ಮೊಕದ್ದಮೆ ಹೂಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಮರ್ಷಿಯಲ್ ಸೆಕ್ಸ್ ಟ್ರಾಫಿಕಿಂಗ್ ಪ್ರಕರಣಗಳಲ್ಲಿ ಮಕ್ಕಳು ಸಿಲುಕಿದ್ದರೆ, ಕೇವಲ ಸಾಧಾರಣ ಕಾನೂನಲ್ಲದೆ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ (ITPA) ಜೊತೆಗೆ ಪೋಕ್ಸೋ ಕಾಯ್ದೆಯನ್ನೂ ಸೇರಿಸಿ ಕಠಿಣ ತನಿಖೆ ನಡೆಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಕೋರ್ಟ್ ಮೆಟ್ಟಿಲೇರಿದ್ದ ‘ಪ್ರಜ್ವಲ’ ಎನ್‌ಜಿಒ
ಮಾನವ ಕಳ್ಳಸಾಗಣೆಗೆ ಬ್ರೇಕ್ ಹಾಕಲು ಹಾಗೂ ಈ ಜಾಲದಲ್ಲಿ ಸಿಲುಕಿ ನಲುಗುತ್ತಿರುವವರನ್ನು ರಕ್ಷಿಸಲು ಕಠಿಣ ಕ್ರಮಗಳು ಬೇಕು ಎಂದು ಆಗ್ರಹಿಸಿ ‘ಪ್ರಜ್ವಲ’ ಎಂಬ ಸ್ವಯಂಸೇವಾ ಸಂಸ್ಥೆಯು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠವು ಈ ಮಹತ್ವದ ಅವಲೋಕನಗಳನ್ನು ಮಾಡಿದೆ.
ಸುಪ್ರೀಂಕೋರ್ಟ್ ಹೇಳಿದ್ದೇನು?
ಮಕ್ಕಳಿದ್ದರೆ ಪೋಕ್ಸೋ ಫಿಕ್ಸ್: ಲೈಂಗಿಕ ವ್ಯವಹಾರಕ್ಕಾಗಿ ಮಕ್ಕಳನ್ನು ಬಳಸಿಕೊಂಡಿರುವುದು ಸಾಬೀತಾದರೆ ಅಲ್ಲಿ ಪೋಕ್ಸೋ ಕಾಯ್ದೆಯ ನಿಯಮಗಳು ನೇರವಾಗಿ ಅನ್ವಯವಾಗುತ್ತವೆ. ಇದರೊಂದಿಗೆ ಬಿಎನ್‌ಎಸ್‌ನ ಸೆಕ್ಷನ್ 143, 144 ಮತ್ತು ಐಟಿಪಿಎ ಕಾನೂನುಗಳೂ ಜಾರಿಯಾಗಲಿವೆ.
ಅಪ್ರಾಪ್ತರ ‘ಒಪ್ಪಿಗೆ’ಗೆ ಮಾನ್ಯತೆಯಿಲ್ಲ: “ನಾವು ಇಷ್ಟಪಟ್ಟೇ ಬಂದಿದ್ದೇವೆ” ಎಂದು ಮಕ್ಕಳು ಹೇಳಿದರೂ ಕಾನೂನಿನಲ್ಲಿ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಅಪ್ರಾಪ್ತರನ್ನು ಇಂತಹ ದಂಧೆಗೆ ಬಳಸಿಕೊಂಡಾಗ ಅವರ ಸಮ್ಮತಿಯನ್ನು ಪರಿಗಣಿಸಲಾಗುವುದಿಲ್ಲ. ಇಲ್ಲಿ ಅಪರಾಧ ಎಸಗಿದವನ ಉದ್ದೇಶವೇನು ಎಂಬುದಷ್ಟೇ ಮುಖ್ಯವಾಗುತ್ತದೆ.
ಮೋಸದ ಜಾಲ: ಲೈಂಗಿಕ ಉದ್ಯಮದಲ್ಲಿದ್ದೇವೆ ಎಂದು ಗೊತ್ತಿದ್ದ ತಕ್ಷಣ ಅವರು ಸಂತ್ರಸ್ತರಲ್ಲ ಎಂದು ಭಾವಿಸುವುದು ತಪ್ಪು. ಆರಂಭದಲ್ಲಿ ಒಳ್ಳೆಯ ಕೆಲಸದ ಆಮಿಷ ಒಡ್ಡಿ, ತಪ್ಪು ಮಾಹಿತಿ ನೀಡಿ, ವಂಚಿಸಿ ಅವರನ್ನು ಈ ನರಕಕ್ಕೆ ತಳ್ಳಿರುವ ಸಾಧ್ಯತೆಗಳೇ ಹೆಚ್ಚಿರುತ್ತವೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ಮಕ್ಕಳ ಹಿತರಕ್ಷಣೆ ಮೊದಲು: ಭಾರತದ ಕಾನೂನಿನ ಪ್ರಕಾರ ಅಪ್ರಾಪ್ತರ ಮೇಲೆ ನಡೆಯುವ ಯಾವುದೇ ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳವನ್ನು ಅವರ ಒಪ್ಪಿಗೆ ಇಲ್ಲದೆ ನಡೆದ ಅಪರಾಧ ಎಂದೇ ನೋಡಲಾಗುತ್ತದೆ.
ಬದುಕು ಕಟ್ಟಿಕೊಡುವುದು ಕಡ್ಡಾಯ: ದಂಧೆಯಿಂದ ಪಾರಾದ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಅತ್ಯಂತ ಜರೂರಿಯಾಗಿದೆ. ಸರಿಯಾದ ಸಾಮಾಜಿಕ ಮತ್ತು ಸಾಂಸ್ಥಿಕ ಬೆಂಬಲ ಸಿಗದಿದ್ದರೆ, ಅವರು ಮತ್ತೆ ಅದೇ ಕತ್ತಲ ಜಗತ್ತಿಗೆ ಬೀಳುವ ಅಪಾಯವಿರುತ್ತದೆ. ಆದ್ದರಿಂದ ಸಂವಿಧಾನದ ವಿಧಿ 21 ಮತ್ತು 23 ರ ಅಡಿಯಲ್ಲಿ ಅವರಿಗೆ ಗೌರವಾನ್ವಿತ ಬದುಕು ಸಿಗುವಂತೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಕೋರ್ಟ್ ಎಚ್ಚರಿಸಿದೆ.








