ನವದೆಹಲಿ :ಭಾರತದ ಕೃಷಿ ಕ್ಷೇತ್ರ ಮತ್ತು ಆರ್ಥಿಕತೆಯನ್ನು ನಿರ್ಧರಿಸುವ ನೈಋತ್ಯ ಮುಂಗಾರು ಮಳೆಗೆ ಈ ವರ್ಷ ಹೊಸ ಸವಾಲು ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೊ’ಪರಿಸ್ಥಿತಿಗಳು ಅಧಿಕೃತವಾಗಿ ಸೃಷ್ಟಿಯಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಧೃಡಪಡಿಸಿದೆ. ಮುಂಬರುವ ತಿಂಗಳುಗಳಲ್ಲಿ ಇದು ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಸಾಮಾನ್ಯವಾಗಿ ಎಲ್ ನಿನೊ ಉಂಟಾದರೆ ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ, ದೀರ್ಘಕಾಲದ ಒಣ ಹವಾಮಾನ (ಮಳೆಯಿಲ್ಲದ ದಿನಗಳು) ಮತ್ತು ತೀವ್ರ ಬಿಸಿಲು ಕಾಣಿಸಿಕೊಳ್ಳುತ್ತದೆ. ಕೆಲವು ವರ್ಷಗಳಲ್ಲಿ ಇದು ತೀವ್ರ ಬರಗಾಲದ ಪರಿಸ್ಥಿತಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಮುಂಗಾರು ಮಳೆಯ ಚಲನೆ ಹೇಗಿರಲಿದೆ? ಇದರಿಂದ ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮುಂಬರುವ ತಿಂಗಳುಗಳಲ್ಲಿ ‘ಎಲ್ ನಿನೊ’ ಎಷ್ಟು ಬಲಗೊಳ್ಳಲಿದೆ?
ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ, ಮುಂಗಾರು ಹಂಗಾಮು ಮುಗಿಯುವವರೆಗೆ ಎಲ್ ನಿನೊ ದುರ್ಬಲಗೊಳ್ಳುವ ಸಾಧ್ಯತೆಯಿಲ್ಲ. ಬದಲಿಗೆ ಇದು ಮತ್ತಷ್ಟು ತೀವ್ರಗೊಳ್ಳಲಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಈ ಎಲ್ ನಿನೊ ‘ಮಧ್ಯಮದಿಂದ ತೀವ್ರ’ ಸ್ವರೂಪಕ್ಕೆ ತಿರುಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ತಿಂಗಳುಗಳಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕ ಮೂಡಿಸಿದೆ.
ಮಳೆಯ ಮೇಲಾಗುವ ಪರಿಣಾಮ ಎಷ್ಟು?
ಹಳೆಯ ಇತಿಹಾಸವನ್ನು ಗಮನಿಸಿದರೆ, ಎಲ್ ನಿನೊ ಬಂದಾಗಲೆಲ್ಲಾ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇದರಿಂದ ದೇಶದ ಕೆಲವು ಭಾಗಗಳಲ್ಲಿ ಮಳೆ ಕೊರತೆ, ಬೆಳೆ ಒಣಗುವುದು ಮತ್ತು ತಾಪಮಾನ ಏರಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಇದರ ನೇರ ಪರಿಣಾಮ ಕೃಷಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ ಮತ್ತು ಜನರ ದೈನಂದಿನ ಜೀವನದ ಮೇಲೆ ಬೀರುತ್ತದೆ. ಆದರೆ, ಮಳೆಯು ಕೇವಲ ಎಲ್ ನಿನೊ ಮೇಲಷ್ಟೇ ಆಧಾರಿತವಾಗಿಲ್ಲ, ಇತರ ಹವಾಮಾನ ಬದಲಾವಣೆಗಳೂ ಇದರ ಮೇಲೆ ಪ್ರಭಾವ ಬೀರುತ್ತವೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.
‘ಇಂಡಿಯನ್ ಓಷನ್ ಡೈಪೋಲ್’ (IOD) ಪರಿಸ್ಥಿತಿ ಏನಾಗಿದೆ?
ಭಾರತದ ಮುಂಗಾರು ಮಳೆಯ ಮೇಲೆ ಪ್ರಭಾವ ಬೀರುವ ಮತ್ತೊಂದು ಪ್ರಮುಖ ಹವಾಮಾನ ವಿದ್ಯಮಾನವೆಂದರೆ ‘ಇಂಡಿಯನ್ ಓಷನ್ ಡೈಪೋಲ್’ (IOD). ಸಾಮಾನ್ಯವಾಗಿ ಐಓಡಿ ‘ಪಾಸಿಟಿವ್’ (ಅನುಕೂಲಕರ) ಆಗಿದ್ದರೆ, ಅದು ಎಲ್ ನಿನೊದಿಂದಾಗುವ ನಷ್ಟವನ್ನು ಕಡಿಮೆ ಮಾಡಿ ದೇಶದಲ್ಲಿ ಉತ್ತಮ ಮಳೆಯಾಗಲು ಸಹಾಯ ಮಾಡುತ್ತದೆ. ಆದರೆ, ಈ ವರ್ಷ ಐಓಡಿ ‘ನ್ಯೂಟ್ರಲ್’ (ತಟಸ್ಥ) ಆಗಿರಲಿದೆ ಎಂದು ಐಎಂಡಿ ಹೇಳಿದೆ. ಅಂದರೆ, ಇದು ಮುಂಗಾರಿಗೆ ಹೆಚ್ಚಿನ ಸಹಾಯವನ್ನೂ ಮಾಡುವುದಿಲ್ಲ, ಹಾಗೆಯೇ ನಷ್ಟವನ್ನೂ ಉಂಟುಮಾಡುವುದಿಲ್ಲ. ಇದರ ಪರಿಣಾಮವಾಗಿ, ಎಲ್ ನಿನೊ ಪ್ರಭಾವವನ್ನು ಎದುರಿಸಲು ಹಿಂದೂ ಮಹಾಸಾಗರದಿಂದ ನಮಗೆ ಹೆಚ್ಚಿನ ಬೆಂಬಲ ಸಿಗದೇ ಇರಬಹುದು.
ಅಸಲಿಗೆ ‘ಎಲ್ ನಿನೊ’ ಎಂದರೇನು? ಭಾರತ ಏಕೆ ಹೆದರುತ್ತದೆ?
ಪೆಸಿಫಿಕ್ ಮಹಾಸಾಗರದ ಭೂಮಧ್ಯರೇಖೆಯ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಅಸಹಜವಾಗಿ ಏರಿಕೆಯಾಗುವುದನ್ನು ‘ಎಲ್ ನಿನೊ’ ಎನ್ನಲಾಗುತ್ತದೆ. ಇದು ಭಾರತದಿಂದ ಸಾವಿರಾರು ಮೈಲಿ ದೂರದಲ್ಲಿ ಸಂಭವಿಸಿದರೂ, ಜಾಗತಿಕ ಹವಾಮಾನವನ್ನು ಬದಲಾಯಿಸುವ ಶಕ್ತಿ ಹೊಂದಿದೆ.
ನಮ್ಮ ದೇಶದಲ್ಲಿ ಕೃಷಿ, ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಎಲ್ ನಿನೊದಿಂದಾಗಿ ಮಳೆ ಕಡಿಮೆಯಾದರೆ ಬೆಳೆ ಇಳುವರಿ ಕುಸಿಯುತ್ತದೆ, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತದೆ ಮತ್ತು ತೀವ್ರ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಭಾರತವು ಎಲ್ ನಿನೊ ಹೆಸರೆತ್ತಿದರೆ ಆತಂಕ ಪಡುತ್ತದೆ.
ಕೇಂದ್ರ ಸರ್ಕಾರದ ಮುನ್ನೆಚ್ಚರಿಕೆ:
ಪ್ರಸ್ತುತ ಹವಾಮಾನ ತಜ್ಞರು ಮುಂಗಾರಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ದೇಶದಲ್ಲಿ ಮುಂಗಾರು ಮಳೆಯ ಮೇಲೆ ಎಲ್ ನಿನೊ ನಕಾರಾತ್ಮಕ ಪರಿಣಾಮ ಬೀರಲಿದ್ದು, ಈ ಬಾರಿ ಮಳೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಎಲ್ ನಿನೊ ಪ್ರಭಾವಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆಯಿರುವ 197 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಬೆಳೆ ನಷ್ಟದ ಅಪಾಯವನ್ನು ಕಡಿಮೆ ಮಾಡಲು ರಾಜ್ಯವಾರು ತುರ್ತು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.








