ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರ ಮಾದರಿಯಲ್ಲೇ ಇದೀಗ ಒಂಟಿ ಪೋಷಕರಾಗಿರುವ (Single male parent) ಅರ್ಹ ಪುರುಷ ಸರ್ಕಾರಿ ನೌಕರರಿಗೂ ಅವರ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 180 ದಿನಗಳ (6 ತಿಂಗಳು) ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಮಹಿಳಾ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು, ಮಕ್ಕಳ ಆರೈಕೆಯ ಹಿತದೃಷ್ಟಿಯಿಂದ ಹಾಗೂ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಒಂಟಿ ಪುರುಷ ನೌಕರರಿಗೂ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.
ಯಾರಿಗೆ ಸಿಗಲಿದೆ ಈ ರಜೆ ಸೌಲಭ್ಯ?
ಸರ್ಕಾರದ ಆದೇಶದ ಪ್ರಕಾರ, ಒಂಟಿ ಪೋಷಕರಾಗಿರುವ ಈ ಕೆಳಗಿನ ಪುರುಷ ನೌಕರರು ಮಾತ್ರ ಈ ರಜೆಗೆ ಅರ್ಹರಾಗಿರುತ್ತಾರೆ:
ಅವಿವಾಹಿತ ಪುರುಷ ನೌಕರರು
ವಿವಾಹ ವಿಚ್ಛೇದನ ಪಡೆದಿರುವ ನೌಕರರು (ಡೈವೋರ್ಸ್ ಆದವರು)
ವಿಧುರ ನೌಕರರು (ಪತ್ನಿ ನಿಧನರಾಗಿರುವವರು)
ಪ್ರಮುಖ ನಿಯಮ ಮತ್ತು ಶರತ್ತುಗಳು:
ಗರಿಷ್ಠ ಅವಧಿ: ಒಂಟಿ ಪುರುಷ ನೌಕರರು ತಮ್ಮ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 6 ತಿಂಗಳು ಅಂದರೆ ಒಟ್ಟು 180 ದಿನಗಳವರೆಗೆ ಮಾತ್ರ ಈ ಶಿಶುಪಾಲನಾ ರಜೆಯನ್ನು ಪಡೆಯಬಹುದು.
ಅತ್ಯಂತ ಪ್ರಮುಖ ನಿಯಮವೆಂದರೆ, ಶಿಶುಪಾಲನಾ ರಜೆ ಪಡೆದಿರುವ ಅವಧಿಯಲ್ಲಿ ಅಥವಾ ರಜೆ ಚಾಲ್ತಿಯಲ್ಲಿರುವಾಗ ಸಂಬಂಧಪಟ್ಟ ಪುರುಷ ನೌಕರನು ಮತ್ತೊಂದು ವಿವಾಹ ಮಾಡಿಕೊಂಡರೆ, ಆ ಮದುವೆಯಾದ ದಿನಾಂಕದಿಂದಲೇ ಶಿಶುಪಾಲನಾ ರಜೆಯು ತಾನಾಗಿಯೇ ರದ್ದಾಗುತ್ತದೆ.
ನಿಯಮಾವಳಿ ಅನ್ವಯ: ದಿನಾಂಕ: 21.06.2021 ರ ಸರ್ಕಾರಿ ಆದೇಶ ಸಂಖ್ಯೆ: ಆಇ 4(ಇ) ಸೇನಿಸೇ 2021 ರಲ್ಲಿ ವಿಧಿಸಲಾಗಿರುವ ಶರತ್ತುಗಳನ್ನೇ ಸಂದರ್ಭಾನುಸಾರ ಅನ್ವಯಿಸಿಕೊಂಡು ಸಕ್ಷಮ ಪ್ರಾಧಿಕಾರವು ಈ ರಜೆಯನ್ನು ಮಂಜೂರು ಮಾಡಬೇಕಿರುತ್ತದೆ.
ಈ ನಿಯಮಾವಳಿಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಲ್ಲಿ (KCSR) ಅಳವಡಿಸಲು ಪ್ರತ್ಯೇಕ ತಿದ್ದುಪಡಿಯನ್ನು ತರಲಾಗುವುದು ಎಂದು ಆರ್ಥಿಕ ಇಲಾಖೆಯ (ಸೇವೆಗಳು-1) ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಅಜಯ್ ಎಸ್. ಕೊರಡೆ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಮಕ್ಕಳನ್ನು ಒಬ್ಬರೇ ಸಾಂಕಿ ಬೆಳೆಸುತ್ತಿರುವ ನೂರಾರು ಒಂಟಿ ಪುರುಷ ನೌಕರರಿಗೆ ತಮ್ಮ ಮಕ್ಕಳ ಆರೈಕೆ ಮಾಡಲು ದೊಡ್ಡ ನೆರವು ಸಿಕ್ಕಂತಾಗಿದೆ.









