ನವದೆಹಲಿ: ಸಿಬಿಎಸ್ಇ (CBSE) 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲು ಮೊಬೈಲ್ ಫೋನ್ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದು, ಇದನ್ನು “ವಂಚನೆ” ಎಂದು ಕರೆದಿದ್ದಾರೆ.
ಮೇ 2025ರಲ್ಲಿ ಕರೆದಿದ್ದ ಟೆಂಡರ್ನಲ್ಲಿ ಉತ್ತರ ಪತ್ರಿಕೆಗಳನ್ನು ಸ್ವಯಂಚಾಲಿತ ರೋಬೋಟಿಕ್ ಸ್ಕ್ಯಾನರ್ಗಳ ಮೂಲಕ ಕನಿಷ್ಠ 300 DPI ಗುಣಮಟ್ಟದಲ್ಲಿ ಸ್ಕ್ಯಾನ್ ಮಾಡಬೇಕೆಂದು ನಿಯಮವಿತ್ತು. ಆದರೆ, ಆಗಸ್ಟ್ನಲ್ಲಿ ಮರು ಟೆಂಡರ್ ಕರೆದಾಗ ಈ ನಿಯಮಗಳನ್ನು ಸಡಿಲಗೊಳಿಸಿ, ಕೇವಲ 200 DPIಗೆ ಇಳಿಸಲಾಯಿತು. ಇದರಿಂದ ಸ್ಕ್ಯಾನಿಂಗ್ ಗುಣಮಟ್ಟ ಕುಸಿಯಲು ಕಾರಣವಾಯಿತು ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ಗುತ್ತಿಗೆ ಪಡೆದ ‘ಕೋಎಂಪ್ಟ್’ (COEMPT) ಕಂಪನಿಯು ವೃತ್ತಿಪರ ಸ್ಕ್ಯಾನರ್ಗಳ ಬದಲಾಗಿ ಮೊಬೈಲ್ ಫೋನ್ಗಳನ್ನು ಬಳಸಿಯೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿದೆ. ಇದೇ ಕಾರಣಕ್ಕೆ ಸ್ಕ್ಯಾನ್ ಮಾಡಿದ ಪ್ರತಿಗಳು ಅಸ್ಪಷ್ಟವಾಗಿರುವುದು (blurred), ಪುಟಗಳು ಕಾಣೆಯಾಗಿರುವುದು ಮತ್ತು ಕೆಲವು ಉತ್ತರ ಪುಸ್ತಕಗಳು ಸ್ಕ್ಯಾನ್ ಆಗದೇ ಇರುವುದು ಕಂಡುಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ದೋಷಗಳು ಕೇವಲ ತಾಂತ್ರಿಕ ತಪ್ಪುಗಳಲ್ಲ, ಬದಲಿಗೆ ನಿರ್ದಿಷ್ಟ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರೂಪಿಸಲಾದ ಒಪ್ಪಂದದ ಫಲಿತಾಂಶ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. “ಇದು ವಂಚನೆ (Fraud). ಅಂಕಗಳ ಮೌಲ್ಯಮಾಪನದಲ್ಲಿ ತಪ್ಪಾಗಿರುವ ಪ್ರತಿ ಮಗುವೂ ಈ ವಂಚನೆಯ ಬಲಿಪಶುವಾಗಿದೆ” ಎಂದು ಅವರು ಹೇಳಿದ್ದಾರೆ.








