ಕಳೆದ ಎರಡು ದಶಕಗಳಿಂದ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು (MGNREGA) ಬದಲಿಸಿ, ಜುಲೈ 1, 2026ರಿಂದ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025’ ಜಾರಿಗೆ ಬರಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೆಲಸದ ದಿನಗಳ ಹೆಚ್ಚಳ: ಉದ್ಯೋಗ ಖಾತ್ರಿ ದಿನಗಳನ್ನು 100ರಿಂದ 125ಕ್ಕೆ ಏರಿಸಲಾಗಿದೆ.ಕೃಷಿ ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ರೈತರಿಗೆ ಕಾರ್ಮಿಕರ ಕೊರತೆಯಾಗದಂತೆ ತಡೆಯಲು, ವರ್ಷದಲ್ಲಿ 60 ದಿನಗಳ ಕಾಲ ಈ ಯೋಜನೆಯನ್ನು ಸ್ಥಗಿತಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಎಂಜಿಎನ್‌ಆರ್‌ಇಜಿಎನಲ್ಲಿ ವೇತನದ ಸಂಪೂರ್ಣ ಹೊಣೆಯನ್ನು ಕೇಂದ್ರವೇ ವಹಿಸುತ್ತಿತ್ತು. ಆದರೆ, ‘ವಿಬಿ-ಜಿ ರಾಮ್ ಜಿ’ ಯೋಜನೆಯಲ್ಲಿ 40% ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗುತ್ತದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು ಹಾಗೂ ಶಾಸನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 90% ಕೇಂದ್ರದ ನೆರವು ಸಿಗಲಿದೆ.
ಮೇಲಿನಿಂದ ಕೆಳಕ್ಕೆ ಹಂಚಿಕೆ (Top-down): ರಾಜ್ಯಗಳ ಲೇಬರ್ ಬಜೆಟ್ ಆಧಾರದ ಮೇಲೆ ಹಣ ಹಂಚಿಕೆ ಮಾಡುತ್ತಿದ್ದ ಹಿಂದಿನ ಮಾದರಿಯನ್ನು ಬದಲಿಸಿ, ಇದೀಗ ಕೇಂದ್ರವೇ ಅನುದಾನ ಹಂಚಿಕೆಯನ್ನು ನಿರ್ಧರಿಸಲಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು ವೇತನ ಪಾವತಿ, ನಿರುದ್ಯೋಗ ಭತ್ಯೆ, ರಾಜ್ಯಗಳಿಗೆ ಅನುದಾನ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ 8 ಕರಡು ನಿಯಮಗಳನ್ನು ಪ್ರಕಟಿಸಿದೆ. ಸಾರ್ವಜನಿಕರು ಒಂದು ತಿಂಗಳ ಒಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು.








