ಗಾಜಾ ನಗರ: ಗಾಜಾ ನಗರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ, ಹಮಾಸ್‌ನ ಮಿಲಿಟರಿ ವಿಭಾಗದ ಹೊಸ ನಾಯಕ ಮೊಹಮ್ಮದ್ ಒಡೆಹ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಬುಧವಾರ ಅಧಿಕೃತವಾಗಿ ಘೋಷಿಸಿದೆ. ತನ್ನ ಹಿಂದಿನ ನಾಯಕ ಮೃತಪಟ್ಟ ಎರಡು ವಾರಗಳ ಒಳಗಾಗಿಯೇ ಇಸ್ರೇಲ್ ಮತ್ತೊಂದು ಪ್ರಮುಖ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮಂಗಳವಾರ ನಡೆದ ಈ ವಾಯುದಾಳಿಯು ಇಸ್ರೇಲ್‌ನ ಮಿಲಿಟರಿ ಅಭಿಯಾನದ ಭಾಗವಾಗಿದೆ. ಈ ದಾಳಿಯಲ್ಲಿ ಒಡೆಹ್ ಜೊತೆಗೆ ಕನಿಷ್ಠ ಐವರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಾತನಾಡಿ, “ಅಕ್ಟೋಬರ್ 7ರ ಹತ್ಯಾಕಾಂಡದ ರೂವಾರಿಗಳಲ್ಲಿ ಒಡೆಹ್ ಕೂಡ ಒಬ್ಬ. ಆ ದಾಳಿಯ ನೇತೃತ್ವ ವಹಿಸಿದ ಪ್ರತಿಯೊಬ್ಬರನ್ನು ನಿರ್ಮೂಲನೆ ಮಾಡುತ್ತೇವೆ ಎಂದು ನಾವು ಪ್ರತಿಜ್ಞೆ ಮಾಡಿದ್ದೆವು. ಅವರೆಲ್ಲರೂ ಎಲ್ಲಿದ್ದರೂ ಸಾಯಲೇಬೇಕು,” ಎಂದು ಕಟುವಾಗಿ ಎಚ್ಚರಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಹತ್ಯಾಕಾಂಡದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಮುಸ್ಲಿಮರ ಪವಿತ್ರ ಹಬ್ಬವಾದ ‘ಈದ್ ಅಲ್-ಅಧಾ’ ಸಂಭ್ರಮದ ಹೊಸ್ತಿಲಲ್ಲೇ ಈ ದಾಳಿ ನಡೆದಿದೆ. ಆದರೆ, ಗಾಜಾದಲ್ಲಿ ಹಬ್ಬದ ಸಂಭ್ರಮದ ಬದಲಾಗಿ ದುಃಖ ಮತ್ತು ಮೌನ ಆವರಿಸಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಗಾಜಾದ ಜನಸಂಖ್ಯೆಯ ಸುಮಾರು ಶೇ. 90ರಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದು, ಮೂಲ ಸೌಕರ್ಯಗಳಿಲ್ಲದ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. “ಇದು ಈದ್ ಅಲ್ಲ… ನಾವು ಈಗಾಗಲೇ ಸತ್ತಿದ್ದೇವೆ” ಎಂದು ಖಾನ್ ಯೂನಿಸ್‌ನಿಂದ ಸ್ಥಳಾಂತರಗೊಂಡಿರುವ ಮಹಮ್ಮದ್ ಸಾಕರ್ ಎಂಬ ನಿವಾಸಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.








