ಶಿವಮೊಗ್ಗ: ರಸಗೊಬ್ಬರ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ನಿರಂತರ ಏರಿಕೆಯನ್ನು ತೀವ್ರವಾಗಿ ಖಂಡಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಮತ್ತು ಸಂಯುಕ್ತ ರೈತ ಸಂಘದ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಕ್ಷಣವೇ ಕೃಷಿ ಬಿಕ್ಕಟ್ಟು ಬಗೆಹರಿಸುವಂತೆ ಒತ್ತಾಯಿಸಿದರು.
ಸರ್ಕಾರಗಳ ರೈತ ವಿರೋಧಿ ನೀತಿ ಬಯಲಾಗಿದೆ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, “ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆ ಹಂತಹಂತವಾಗಿ ಬಯಲಿಗೆ ಬರುತ್ತಿದೆ. ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಭರವಸೆಗಳೆಲ್ಲಾ ಪೊಳ್ಳು ಎಂಬುದು ಈಗ ಸಾಬೀತಾಗಿದೆ. ಸ್ವಾಮಿನಾಥನ್ ವರದಿ ಜಾರಿ, ಬೆಂಬಲಬೆಲೆ ಮತ್ತು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ರಾಜ್ಯ ಸರ್ಕಾರವೂ ಸಹ ಎಪಿಎಂಸಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸರ್ಕಾರಗಳ ಈ ನೀತಿಗಳಿಂದಾಗಿ ರೈತರು ಕೃಷಿಯಿಂದಲೇ ವಿಮುಖರಾಗುವ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸಗೊಬ್ಬರ ಕಾಳಸಂತೆ ತಡೆದು, ಡೀಸೆಲ್‌ಗೆ ಸಬ್ಸಿಡಿ ನೀಡಿ
“ಪ್ರಧಾನಿ ನರೇಂದ್ರ ಮೋದಿಯವರ ಕೃಷಿ ನೀತಿ ರೈತರಿಗೆ ಮಾರಕವಾಗಿದೆ. ಮಾರುಕಟ್ಟೆಯಲ್ಲಿ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಬಡ ರೈತರು ದುಬಾರಿ ಬೆಲೆ ತೆತ್ತು ಗೊಬ್ಬರ ಖರೀದಿಸುತ್ತಿದ್ದಾರೆ. ಸರ್ಕಾರ ತಕ್ಷಣ ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಿಸಬೇಕು. ಇಂಧನ ದರ ಏರಿಕೆಯಿಂದ ಕೃಷಿ ವೆಚ್ಚ ದುಪ್ಪಟ್ಟಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಸಲು ಕೇಂದ್ರ ಸರ್ಕಾರ ಗಮನ ಹರಿಸಬೇಕು. ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಂಬಲಬೆಲೆ ಘೋಷಿಸಿ, ಸರ್ಕಾರಗಳೇ ನೇರವಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು” ಎಂದು ಮನವಿ ಮಾಡಿದರು.
ಕೇಂದ್ರದ ವಿದೇಶಿ ನೀತಿಯಿಂದ ಕೃಷಿಗೆ ಹಿನ್ನೆಡೆ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ ಕುಮಾರ್ ಮಾತನಾಡಿ, “ಪ್ರಧಾನಿ ಮೋದಿಯವರ ವಿದೇಶಿ ನೀತಿಯು ಕೃಷಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಮಾರಕವಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಹೊರತುಪಡಿಸಿ ಇತರ ದೇಶಗಳೊಂದಿಗೆ ಇದ್ದ ವ್ಯಾಪಾರ ಒಪ್ಪಂದಗಳು ಹಳ್ಳ ಹಿಡಿದಿವೆ. ಬಹುತೇಕ ದೇಶಗಳು ಭಾರತದ ವಿರುದ್ಧ ಇರುವುದರಿಂದ ಕೃಷಿಗೆ ಅಗತ್ಯವಾದ ಅನೇಕ ಕಚ್ಚಾ ವಸ್ತುಗಳು ಆಮದಾಗುತ್ತಿಲ್ಲ. ರಸಗೊಬ್ಬರ, ಬಿತ್ತನೆಬೀಜ, ಇಂಧನ ಎಲ್ಲವೂ ದುಬಾರಿಯಾಗಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ” ಎಂದರು.
ಅವೈಜ್ಞಾನಿಕ ‘ಎಫ್‌ಐಡಿ’ ಪದ್ಧತಿಯಿಂದ ರೈತರು ವಂಚಿತ
ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್ ಕುಮಾರ್ ಮಾತನಾಡಿ, “ಕೇಂದ್ರ ಸರ್ಕಾರದ ರಸಗೊಬ್ಬರ ವಿತರಣಾ ನೀತಿ ಅವೈಜ್ಞಾನಿಕವಾಗಿದೆ. ಎಫ್.ಐ.ಡಿ. (FID) ಪದ್ಧತಿಯಂತೆ ಎಕರೆಗೆ ಕೇವಲ ಒಂದು ಚೀಲ ಗೊಬ್ಬರ ನೀಡಿದರೆ ಫಸಲಿನ ಇಳುವರಿ ಹೆಚ್ಚಿಸಲು ಸಾಧ್ಯವಿಲ್ಲ. ಸಾಗರ ತಾಲ್ಲೂಕಿನಲ್ಲಿ 70 ಸಾವಿರ ರೈತರಿದ್ದು, ಈ ಪೈಕಿ 62 ಸಾವಿರ ರೈತರು ಮಾತ್ರ ಎಫ್‌ಐಡಿ ಅಡಿ ಬರುತ್ತಾರೆ. ಇನ್ನುಳಿದ 8 ಸಾವಿರ ರೈತರು ಹಾಗೂ ಬಗರ್ ಹುಕುಂ ಸಾಗುವಳಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರು ಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಪ್ರತಿಭಟನಾ ಧರಣಿಯಲ್ಲಿ ರೈತ ಸಂಘದ ಅಧ್ಯಕ್ಷ ಸುಂದರ ಸಿಂಗ್, ಪ್ರಮುಖರಾದ ಎಂ.ಬಿ. ಮಂಜಪ್ಪ, ಹೊಯ್ಸಳ ಗಣಪತಿಯಪ್ಪ, ಜಯಲಕ್ಷ್ಮಿ ಭದ್ರೇಶ್ ಬಾಳಗೋಡು, ಯು.ಪಿ. ಜೋಸೆಫ್, ರೇವಪ್ಪ ಹೊಸಕೊಪ್ಪ, ರಾಮಣ್ಣ ಹಸಲರು, ಸತೀಶ್ ಅಂಗಡಿ, ವೇದಮೂರ್ತಿ, ದೇವು ಆಲಳ್ಳಿ, ರಾಮಪ್ಪ ಶಿರವಾಳ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
BREAKING: ರಾಜ್ಯ ಸರ್ಕಾರದಿಂದ ಮೂವರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ | IAS Officer Transfer








