ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಚೂರಿಯಿಂದ ಇರಿದು ಕೊಲೆ ಮಾಡಿದ ಮುಖ್ಯ ಆರೋಪಿ ಮಂಜು ಯಾನೆ ಟೀಪುಡಿ ಮಂಜು ಹಾಗೂ ಕೊಲೆ ಕೃತ್ಯವನ್ನು ಕೌಟಂಬಿಕ ಕಲಹವೆಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಮೃತನ ಪತ್ನಿ ಚೈತ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಸಾಗರ ಪಟ್ಟಣದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈ ಕುರಿತಂತೆ ಮೇ 26 ರಂದು ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಮಂಜು ಹಾಗೂ ಚೈತ್ರಾ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಷಯ ಪರಶುರಾಮ್ಗೆ ತಿಳಿದು, ದಂಪತಿ ನಡುವೆ ಆಗಾಗ್ಗೆ ಭೀಕರ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಮೇ 15 ರ ರಾತ್ರಿ ಕೂಡ ಪರಶುರಾಮ್ ಹಾಗೂ ಚೈತ್ರಾ ನಡುವೆ ಕೌಟಂಬಿಕ ಜಗಳ ಏರ್ಪಟ್ಟಿದೆ. ಈ ವಿಷಯ ತಿಳಿದು ಚೈತ್ರಾಳ ಪ್ರಿಯಕರ ಮಂಜು ತಕ್ಷಣವೇ ಅವರ ಮನೆಗೆ ಧಾವಿಸಿದ್ದು, ಪರಶುರಾಮ್ ಜೊತೆ ಗಲಾಟೆಗೆ ಇಳಿದಿದ್ದಾನೆ.
ಕುಡುಗೋಲು-ಚಾಕುವಿನಿಂದ ಜಗಳ, ಚಿಕಿತ್ಸೆ ಫಲಿಸದೆ ಸಾವು
ಜಗಳ ತಾರಕಕ್ಕೇರಿದಾಗ ಪರಶುರಾಮ್ ಕುಡುಗೋಲು ಹಿಡಿದರೆ, ಆರೋಪಿ ಮಂಜು ತನ್ನ ಬಳಿಯಿದ್ದ ಚಾಕು ಹಿಡಿದು ಮುಗಿಬಿದ್ದಿದ್ದಾನೆ. ಈ ವೇಳೆ ನಡೆದ ಮಾರಾಮಾರಿಯಲ್ಲಿ ಮಂಜು ನಡೆಸಿದ ಚೂರಿ ಇರಿತದಿಂದ ಪರಶುರಾಮ್ ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ನೆರೆಹೊರೆಯವರು ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪರಶುರಾಮ್ ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪತ್ನಿ
ಕೊಲೆ ನಡೆದ ಬಳಿಕ ಪತ್ನಿ ಚೈತ್ರಾ ತನ್ನ ಪ್ರಿಯಕರನನ್ನು ರಕ್ಷಿಸಲು ಇಡೀ ಕೃತ್ಯವನ್ನು ಕೇವಲ ಕೌಟಂಬಿಕ ಜಗಳ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾಳೆ. ಆದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಅನೈತಿಕ ಸಂಬಂಧದ ಅಸಲಿ ಸತ್ಯ ಹೊರಬಂದಿದೆ. ಚೂರಿಯಿಂದ ಇರಿದ ಆರೋಪದ ಮೇಲೆ ಮಂಜು ಹಾಗೂ ಕೃತ್ಯವನ್ನು ಮರೆಮಾಚಿದ ಆರೋಪದ ಮೇಲೆ ಚೈತ್ರಾಳನ್ನು ಸಾಗರ ಟೌನ್ ಪೊಲೀಸರು ಜೈಲಿಗಟ್ಟಿದ್ದಾರೆ.
ಎಸ್ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲಿನ ಸಮಯ ಪರಿಷ್ಕರಣೆ
ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಹದಗೆಟ್ಟ ವ್ಯವಸ್ಥೆ: ವೈದ್ಯರ ಕೊರತೆ ನೀಗಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ!








