ಸ್ಥಳೀಯ ವರದಿಗಳ ಪ್ರಕಾರ, ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿರುವ (Chattogram) ಭಾರತದ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ಭಾರತೀಯ ಪ್ರೋಟೋಕಾಲ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಚಂಡೀಗಢ ಮೂಲದ 38 ವರ್ಷದ ನರೇನ್ ಧರ್ ಎಂದು ಗುರುತಿಸಲಾಗಿದೆ. ಅವರು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸಹಾಯಕ ಪ್ರೋಟೋಕಾಲ್ ಅಧಿಕಾರಿಯಾಗಿ (Assistant Protocol Officer) ಸೇವೆ ಸಲ್ಲಿಸುತ್ತಿದ್ದರು. ವರದಿಯ ಪ್ರಕಾರ, ಬಂದರು ನಗರಿ ಚಿತ್ತಗಾಂಗ್‌ನ ಖುಲ್ಶಿ ಪ್ರದೇಶದ ಜಾಕಿರ್ ಹುಸೇನ್ ರಸ್ತೆಯಲ್ಲಿರುವ ಕಚೇರಿ ಆವರಣದೊಳಗೆ ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ.
ಕಟ್ಟಡದ ಎರಡನೇ ಮಹಡಿಯಲ್ಲಿರುವ ಡೇಟಾ ಎಂಟ್ರಿ ಕೊಠಡಿಯ ಶೌಚಾಲಯದ ಬಾಗಿಲಿನ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೊಲೀಸ್ ಸಾರ್ವಜನಿಕ ಸಂಪರ್ಕ ಸಹಾಯಕ ಕಮಿಷನರ್ ಅಮಿನ್ ಉರ್ ರಶೀದ್ ತಿಳಿಸಿದ್ದಾರೆ. ಧರ್ ಅವರು ಹೃದಯಾಘಾತದಿಂದ (Cardiac Arrest) ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸುವ ಮುನ್ನ ಪೊಲೀಸರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.








