ಶಿವಮೊಗ್ಗ: ಮಠಮಂದಿರಗಳು ಸಂಸ್ಕೃತ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿವೆ. ಸಂಸ್ಕೃತ ಪ್ರಸಾರ ಮಾಡುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸಿರುವ ಇಲ್ಲಿನ ಶಂಕರಮಠದ ಪರಿಕಲ್ಪನೆ ಅತ್ಯಂತ ಅಭಿನಂದಾರ್ಹ ಎಂದು ಸಾಗರದಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘದ ಹಿರಿಯ ಸಲಹೆಗಾರರಾದ ಮಾ.ಸ. ನಂಜುಂಡಸ್ವಾಮಿ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಬಾಲಭಾರತಿ ಸಂಸ್ಕಾರ ಸುಧಾ ಬೇಸಿಗೆ ಶಿಬಿರ’ದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಚಿತ ಶಿಬಿರದ ಮೂಲಕ ಸಂಸ್ಕಾರ ಬಿತ್ತುವ ಕೆಲಸ: ಕಳೆದ 14 ದಿನಗಳ ಕಾಲ ನ್ಯಾಯವಾದಿ ಶ್ರಾವ್ಯ ಹೆಗಡೆ ದಂಪತಿಗಳ ನೇತೃತ್ವದಲ್ಲಿ ನಡೆದ ಈ ಶಿಬಿರವು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಬೇಸಿಗೆ ರಜಾ ಶಿಬಿರಗಳು ಕೇವಲ ವ್ಯವಹಾರಿಕ ಕೇಂದ್ರಗಳಾಗುತ್ತಿದ್ದು, ಹಣ ಗಳಿಕೆಗೆ ಮಾತ್ರ ಸೀಮಿತವಾಗುತ್ತಿವೆ ಎಂಬ ದೂರುಗಳಿವೆ. ಆದರೆ, ಶಂಕರಮಠವು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿ ಈ ಶಿಬಿರ ನಡೆಸಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಶ್ಲಾಘಿಸಿದರು.
ಇದೇ ವೇಳೆ ಮಹಿಳೆಯರ ಪಾತ್ರದ ಕುರಿತು ಮಾತನಾಡಿದ ಅವರು, “ನಮ್ಮ ಸಂಸ್ಕೃತಿ ಉಳಿದಿರುವುದು ಮನೆಯಲ್ಲಿರುವ ಮಹಿಳೆಯರಿಂದ. ಮನೆಯಲ್ಲಿ ಮಹಿಳೆಯರು ಮೊಬೈಲ್ ಹಾಗೂ ಧಾರವಾಹಿಗಳಿಂದ ದೂರವಿದ್ದು, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆಯಬೇಕು. ನಾವು ನಂಬುವ ದೇವರು ಮತ್ತು ಮಠಗಳ ಬಗ್ಗೆ ಮಕ್ಕಳಲ್ಲಿ ಅಧ್ಯಯನ ಹಾಗೂ ಅನುಷ್ಠಾನದ ಆಸಕ್ತಿ ಬೆಳೆಸಬೇಕು” ಎಂದು ಕರೆ ನೀಡಿದರು.
ಸಂಸ್ಕೃತಿ ಮರೆಯದ ಉನ್ನತ ಸ್ಥಾನ ತಲುಪಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ವಾನ್ ಚಿರಂತನ ಬಡ್ತಿ ಮಾತನಾಡಿ, “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವುದನ್ನು ಯಾರೂ ಮರೆಯಬಾರದು. ಹಿಂದೆ ಮನೆಯಲ್ಲೇ ಸಹಜವಾಗಿ ಸಿಗುತ್ತಿದ್ದ ಸಂಸ್ಕಾರವನ್ನು, ಇಂದು ಕಲಿಯಲು ಶಿಬಿರಗಳಿಗೆ ಕಳುಹಿಸುವ ಕಾಲ ಬಂದಿದೆ. ಮಕ್ಕಳು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಮೂಲ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು” ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಶ್ರಾವ್ಯ ಸಾಗರ್, ಸದಾನಂದ ಶರ್ಮ, ಸವಿತಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸಚಿನ್ ಹೆಗಡೆ ಕಾರ್ಯಕ್ರಮವನ್ನು ಅತ್ಯಾಕರ್ಷಕವಾಗಿ ನಿರೂಪಿಸಿದರು.








