ತೈವಾನ್‌ನ ಕಾವೋಸಿಯುಂಗ್ (Kaohsiung) ನಗರದಲ್ಲಿ ಅಳವಡಿಸಲಾದ ರಾಜಕೀಯ ಬಿಲ್‌ಬೋರ್ಡ್ (ಫ್ಲೆಕ್ಸ್) ಒಂದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲಿನ ಸ್ಥಳೀಯ ಅಭ್ಯರ್ಥಿ ಲೀ ಹಂಗ್-ಯಿ (Lee Hung-yi) ಅವರು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆಯನ್ನು ಹೋಲುವ ಚಿತ್ರಗಳನ್ನು ಬಳಸಿ ಚುನಾವಣಾ ಪ್ರಚಾರ ನಡೆಸಿರುವುದೇ ಈ ಆಕ್ರೋಶಕ್ಕೆ ಕಾರಣವಾಗಿದೆ.
ತೈವಾನ್‌ನಲ್ಲಿನ ಈ ವಿವಾದಾತ್ಮಕ ರಾಜಕೀಯ ಬಿಲ್‌ಬೋರ್ಡ್ ಅಂತರ್ಜಾಲದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ ಮತ್ತು ಅಲ್ಲಿ ವಾಸಿಸುವ ಭಾರತೀಯ ಮೂಲದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಕೌನ್ಸಿಲ್ ಚುನಾವಣಾ ಅಭ್ಯರ್ಥಿಯೊಬ್ಬರು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಹಲವರು ಬಣ್ಣಿಸಿರುವ ಚಿತ್ರಗಳನ್ನು ಬಳಸಿ ಪ್ರಚಾರ ನಡೆಸಿರುವುದು ಇದಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಈ ಬಿಲ್‌ಬೋರ್ಡ್ ಅನ್ನು ಕಾವೋಸಿಯುಂಗ್ ನಗರದ ಸಿಯಾವೋಗಾಂಗ್ (Siaogang) ಜಿಲ್ಲೆಯ ಶಾನ್‌ಮಿಂಗ್ ರಸ್ತೆಯಲ್ಲಿ ಅಳವಡಿಸಲಾಗಿದ್ದು, ಇದು ಸ್ಥಳೀಯ ಕೌನ್ಸಿಲ್ ಅಭ್ಯರ್ಥಿ ಲೀ ಹಂಗ್-ಯಿ ಅವರಿಗೆ ಸೇರಿದ್ದಾಗಿದೆ. ಈ ಪೋಸ್ಟರ್‌ನಲ್ಲಿ ಪೇಟ (Turban) ಮತ್ತು ಗಡ್ಡ ಹೊಂದಿರುವ ಕಂದು ಬಣ್ಣದ ಚರ್ಮದ ವ್ಯಕ್ತಿಯ ಚಿತ್ರದ ಮೇಲೆ ಕೆಂಪು ಬಣ್ಣದ ಇಂಟು (crossed-out) ಗುರುತು ಹಾಕಲಾಗಿದೆ ಮತ್ತು ಅದರೊಂದಿಗೆ ತಲೆಕೆಳಗಾಗಿರುವ ಭಾರತದ ರಾಷ್ಟ್ರಧ್ವಜದಂತಹ ಚಿತ್ರವನ್ನು ಬಳಸಲಾಗಿದೆ.








