ಶಿವಮೊಗ್ಗ: ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಹೆಚ್ಚು ಅಂಕ ಗಳಿಸಲು ಮತ್ತು ಸಾಧನೆ ಮಾಡಲು ಸಾಧ್ಯ ಎಂಬುದು ಕೇವಲ ಭ್ರಮೆ. ಕನ್ನಡ ಮಾಧ್ಯಮದಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ಜನ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್ ಪಡೆದು ದೊಡ್ಡ ಪ್ರತಿಭಾವಂತರಾಗಿ ಹೊರಹೊಮ್ಮಿದ್ದಾರೆ ಎಂದು ರೈತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಶಿವಾನಂದ ಕುಗ್ವೆ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕುಗ್ವೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಕುಗ್ವೆ ಸರ್ಕಾರಿ ಶಾಲೆಯಲ್ಲಿ ಗಿಡ ನೆಟ್ಟು, ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಇಂದಿನ ವಾಸ್ತವ ಮತ್ತು ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ಭ್ರಮೆಗಳಿಂದ ಸರ್ಕಾರಿ ಶಾಲೆಗಳು ಬಡವಾಗಿವೆ
ಇಂಗ್ಲಿಷ್ ವ್ಯಾಮೋಹದಂತಹ ಹಲವು ಭ್ರಮೆಗಳು ನಮ್ಮ ಸರ್ಕಾರಿ ಶಾಲೆಗಳನ್ನು ಇಂದು ಬಡವಾಗಿಸಿವೆ. ಜನರ ನಿರಾಸಕ್ತಿಯೂ ಇದಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಿಗೆ ನೀಡಬೇಕಾದಷ್ಟು ಗಮನ ನೀಡುತ್ತಿಲ್ಲ. ಅನೇಕ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಮತ್ತು ಎಲ್ಲಾ ವಿಷಯಗಳಿಗೆ ಅಗತ್ಯವಿರುವ ತಜ್ಞ ಶಿಕ್ಷಕರನ್ನು ನೇಮಿಸುತ್ತಿಲ್ಲ. ಇದು ಸರ್ಕಾರದ ಹಾಗೂ ಶಿಕ್ಷಣ ಇಲಾಖೆಯ ದೌರ್ಬಲ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಮುದಾಯದ ಸಹಭಾಗಿತ್ವದ ಅಗತ್ಯ
ಹಿಂದೆ ಜಾರಿಗೆ ತಂದ ‘ಸಮುದಾಯದತ್ತ ಶಾಲೆಗಳು’ ನಂತಹ ಯೋಜನೆಗಳು ಜನರನ್ನು ಮತ್ತು ಶಾಲೆಗಳನ್ನು ಹತ್ತಿರ ತರುವಲ್ಲಿ ಯಶಸ್ವಿಯಾಗಲಿಲ್ಲ. ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರಗಳನ್ನು ಮಾಡಿ ಮಾರ್ಗದರ್ಶನ ನೀಡಿದರೂ, ನಾವು ನಿರೀಕ್ಷಿಸಿದ ಮಟ್ಟಕ್ಕೆ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ನೂರಾರು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಶತಮಾನದ ಇತಿಹಾಸವಿರುವ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳ ಕೊರತೆ ಎದುರಾಗಿರುವುದು ಬೇಸರದ ಸಂಗತಿ ಎಂದರು.
ವ್ಯಾಪಾರೀಕರಣಗೊಳ್ಳುತ್ತಿರುವ ಶಿಕ್ಷಣ ಕ್ಷೇತ್ರ
ಇತ್ತೀಚೆಗೆ ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಆರಂಭಿಸಿ ಎಲ್‌ಕೆಜಿಯಿಂದ ಕಾಲೇಜಿನವರೆಗೆ ಉಚಿತ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದೆ. ಆದರೆ ಇದು ಎಷ್ಟು ಪ್ರಾಯೋಗಿಕ ಎಂಬ ಅನುಮಾನವಿದೆ. ಇಂತಹ ಶಾಲೆಗಳನ್ನು ಮುಂದೆ ಖಾಸಗಿ ಸಂಸ್ಥೆಗಳಿಗೆ ವಹಿಸಿದರೆ, ಅಲ್ಲಿಯೂ ಭಾರಿ ಪ್ರಮಾಣದ ಫೀಸ್ ವಸೂಲಿ ಆರಂಭವಾಗುತ್ತದೆ.
ಇಂದು ಖಾಸಗಿ ಶಾಲೆಗಳಿಗಿಂತ ಹೆಚ್ಚು ಅರ್ಹತೆ ಹಾಗೂ ಸಾಮರ್ಥ್ಯವಿರುವ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಆದರೆ ಪೋಷಕರ ನಿರಾಸಕ್ತಿಯಿಂದಾಗಿ ಅವರನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಕೇವಲ ಯೂನಿಫಾರ್ಮ್, ಬಸ್ಸು ಮತ್ತು ಐಷಾರಾಮಿ ಶೈಲಿಗೆ ಮಾರುಹೋಗಿ ಪೋಷಕರು ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ಮಕ್ಕಳನ್ನು ಸೇರಿಸುತ್ತಿದ್ದಾರೆ. ರಾಜಕಾರಣಿಗಳು ಮತ್ತು ಉದ್ಯಮಿಗಳ ಕೈಯಲ್ಲಿರುವ ಶಿಕ್ಷಣ ಕ್ಷೇತ್ರವು ಇಂದು ಸಂಪೂರ್ಣವಾಗಿ ವ್ಯಾಪಾರೀಕರಣಗೊಂಡಿದೆ. ಇದು ಮುಂದಿನ ಪೀಳಿಗೆಗೆ ದೊಡ್ಡ ದುರಂತ ಎಂದು ಶಿವಾನಂದ ಕುಗ್ವೆ ಆತಂಕ ವ್ಯಕ್ತಪಡಿಸಿದರು.
ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕರೆ
ಕೇವಲ ಕನಸು ಕಾಣುವುದರಿಂದ ಶಾಲೆಗಳ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಸ್ಥರು, ಯುವ ಮುಖಂಡರು, ಶಾಲಾ ಸುಧಾರಣಾ ಸಮಿತಿಯವರು ಹಾಗೂ ಪೋಷಕರು ಕೇವಲ ಸರ್ಕಾರದ ಕಡೆಗೆ ಮುಖ ಮಾಡದೆ, ನಮ್ಮ ಊರಿನ ಶಾಲೆಯ ಅಭಿವೃದ್ಧಿಗೆ ನಾವೇನು ಮಾಡಬಹುದು ಎಂದು ಯೋಚಿಸಬೇಕು. ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ಮಾಡಲು ನಾವೆಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.








