ಸಾಂಕ್ರಾಮಿಕ ರೋಗಗಳ ಉಲ್ಬಣವು ಕೇವಲ ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ, ಅವು ಹಿಂದೆಂದಿಗಿಂತಲೂ ಭೀಕರ ಹಾನಿಯನ್ನು ಉಂಟುಮಾಡುತ್ತಿವೆ ಎಂದು ಹೊಸ ವರದಿಯೊಂದು ಸೂಚಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಸಿದ್ಧತೆ ಮೇಲ್ವಿಚಾರಣಾ ಮಂಡಳಿ (GPMB) ಬಿಡುಗಡೆ ಮಾಡಿರುವ ‘ಎ ವರ್ಲ್ಡ್ ಆನ್ ದಿ ಎಡ್ಜ್: ಪ್ರಯಾರಿಟೀಸ್ ಫಾರ್ ಎ ಪ್ಯಾಂಡೆಮಿಕ್-ರೆಸಿಲಿಯೆಂಟ್ ಫ್ಯೂಚರ್’ (A World on the Edge: Priorities for a Pandemic-Resilient Future) ಎಂಬ ಇತ್ತೀಚಿನ ವರದಿಯು, ಇಂತಹ ಕಾಯಿಲೆಗಳು ಆರೋಗ್ಯ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವಲಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ತಿಳಿಸಿದೆ.
ಪಶ್ಚಿಮ ಆಫ್ರಿಕಾದ ಎಬೋಲಾದಿಂದ ಹಿಡಿದು ಕೋವಿಡ್-19 ಮತ್ತು ಎಂಪಾಕ್ಸ್ (mpox) ವರೆಗೆ, ಕಳೆದ ದಶಕದಲ್ಲಿ ಸಂಭವಿಸಿದ ಅಂತರರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು (PHEICs) ಮತ್ತು ಅವುಗಳ ತೀವ್ರತೆಯನ್ನು ವಿಶ್ಲೇಷಿಸಿರುವ ಈ ವರದಿಯು, ಮುಂದಿನ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಾವು ಇನ್ನು ಸರಿಯಾಗಿ ಸಿದ್ಧವಾಗಿಲ್ಲ ಎಂದು ನೆನಪಿಸಿದೆ. ಈ ಕುರಿತು ಮಾತನಾಡಿದ GPMB ಸಹ-ಅಧ್ಯಕ್ಷರಾದ ಹೆಚ್.ಇ. ಕೊಲಿಂಡಾ ಗ್ರಾಬರ್-ಕಿಟಾರೋವಿಕ್, “ವಿಶ್ವದಲ್ಲಿ ಪರಿಹಾರಗಳಿಗೇನೂ ಕೊರತೆಯಿಲ್ಲ. ಆದರೆ ವಿಶ್ವಾಸ ಮತ್ತು ಸಮಾನತೆ ಇಲ್ಲದಿದ್ದರೆ, ಆ ಪರಿಹಾರಗಳು ಅಗತ್ಯವಿರುವ ಜನರನ್ನು ತಲುಪುವುದಿಲ್ಲ. ಮುಂದಿನ ಬಿಕ್ಕಟ್ಟು ಬಡಿಯುವ ಮುನ್ನವೇ ರಾಜಕೀಯ ನಾಯಕರು, ಉದ್ಯಮಗಳು ಮತ್ತು ನಾಗರಿಕ ಸಮಾಜವು ತಮ್ಮ ಬದ್ಧತೆಗಳನ್ನು ಪ್ರಗತಿಯನ್ನಾಗಿ ಪರಿವರ್ತಿಸಿದರೆ, ಜಾಗತಿಕ ಸಿದ್ಧತೆಯ ಹಾದಿಯನ್ನು ಬದಲಾಯಿಸಲು ಇನ್ನು ಕಾಲ ಮಿಂಚಿಲ್ಲ,” ಎಂದಿದ್ದಾರೆ.
ಹೈದರಾಬಾದ್‌ನ ಯಶೋದಾ ಹಾಸ್ಪಿಟಲ್ಸ್‌ನ ಸಾಂಕ್ರಾಮಿಕ ರೋಗಗಳ ತಜ್ಞರಾದ ಡಾ. ಹರಿ ಕಿಶನ್ ಬೂರುಗು ಮಾತನಾಡಿ, “ಸಾಂಕ್ರಾಮಿಕ ರೋಗಗಳು ತಲೆಮಾರಿಗೊಮ್ಮೆ ಮಾತ್ರ ಬರುತ್ತವೆ ಎಂಬ ನಂಬಿಕೆಗೆ ವ್ಯತಿರಿಕ್ತವಾಗಿ, ಇತ್ತೀಚಿನ GPMB ವರದಿಯು ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗಗಳ ಉಲ್ಬಣವು ಹೆಚ್ಚು ಆಗಾಗ್ಗೆ ಸಂಭವಿಸುತ್ತಿದೆ ಮತ್ತು ತೀವ್ರ ಅಡಚಣೆಯನ್ನು ಉಂಟುಮಾಡುತ್ತಿದೆ ಎಂಬುದನ್ನು ನೆನಪಿಸುತ್ತಿದೆ,” ಎಂದಿದ್ದಾರೆ. “ಈ ರೋಗಗಳ ಉಲ್ಬಣವು ಈಗ ಕೇವಲ ಒಂದು ದೇಶ ಅಥವಾ ಒಂದು ಹವಾಮಾನಕ್ಕೆ ಸೀಮಿತವಾಗಿಲ್ಲ. ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ನಗರೀಕರಣ, ಅಂತರರಾಷ್ಟ್ರೀಯ ಪ್ರಯಾಣ, ಅರಣ್ಯ ನಾಶ ಮತ್ತು ಮಾನವನ ಹಸ್ತಕ್ಷೇಪದಿಂದಾಗಿ ಪ್ರಾಣಿಗಳೊಂದಿಗಿನ ನಿಕಟ ಸಂಪರ್ಕವು ಸೋಂಕುಗಳು ಹಿಂದೆಂದಿಗಿಂತಲೂ ವೇಗವಾಗಿ ಹರಡಲು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತಿವೆ. ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಪ್ರದೇಶಗಳಲ್ಲೂ ಈಗ ದಾಖಲಾಗುತ್ತಿವೆ. ಇಂದಿನ ಜಗತ್ತು ತೀವ್ರವಾಗಿ ಪರಸ್ಪರ ಸಂಪರ್ಕ ಹೊಂದಿರುವುದರಿಂದ, ಸ್ಥಳೀಯ ಆರೋಗ್ಯ ಸಮಸ್ಯೆ (Local Outbreak) ಕೇವಲ ಕೆಲವೇ ದಿನಗಳಲ್ಲಿ ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಬದಲಾಗಬಹುದು,” ಎಂದು ಡಾ. ಬೂರುಗು ವಿವರಿಸಿದ್ದಾರೆ.
ಕೋವಿಡ್-19 ನಮಗೆ ಹಲವು ಪಾಠಗಳನ್ನು ಕಲಿಸಿದೆ ಮತ್ತು ಲಸಿಕೆ ಅಭಿವೃದ್ಧಿ, ಕಣ್ಗಾವಲು ವ್ಯವಸ್ಥೆ (Surveillance) ಹಾಗೂ ರೋಗ ಪತ್ತೆಹಚ್ಚುವಿಕೆಯಲ್ಲಿ ಗಮನಾರ್ಹ ಸುಧಾರಣೆಗಳಾಗಿವೆ. “ಸಾಂಕ್ರಾಮಿಕ ರೋಗದ ಸಮಯದಲ್ಲಿ, ಅನೇಕ ದೇಶಗಳು ತಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದವು. ಆದರೆ ಬಿಕ್ಕಟ್ಟು ಮುಗಿದ ತಕ್ಷಣ, ದೀರ್ಘಕಾಲೀನ ಸಿದ್ಧತೆಗಳ ಮೇಲಿನ ಹೂಡಿಕೆಗಳು ನಿಧಾನಗೊಂಡವು. ಜನರು ಕಾಯಿಲೆಗೆ ಬಿದ್ದ ನಂತರವಷ್ಟೇ ಸಿದ್ಧತೆಗಳು ಆರಂಭವಾಗಬಾರದು. ಅದಕ್ಕೆ ನಿರಂತರ ಯೋಜನೆ, ಧನಸಹಾಯ ಮತ್ತು ಸರ್ಕಾರಗಳು, ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳು ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ನಡುವೆ ನಿರಂತರ ಸಮನ್ವಯತೆಯ ಅಗತ್ಯವಿದೆ,” ಎಂದು ಡಾ. ಬೂರುಗು ಹೇಳಿದ್ದಾರೆ.
ಥಾಣೆಯ ಕಿಮ್ಸ್ (KIMS) ಹಾಸ್ಪಿಟಲ್ಸ್‌ನ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಸುಂದರ್ ಕೃಷ್ಣನ್ ಮಾತನಾಡಿ, “ವೈದ್ಯರು ಕೇವಲ ರೋಗಗಳು ಎಷ್ಟು ಬೇಗ ಹರಡುತ್ತವೆ ಎಂಬುದರ ಬಗ್ಗೆ ಮಾತ್ರವಲ್ಲ, ಬದಲಿಗೆ ಅವು ಆರೋಗ್ಯ ವ್ಯವಸ್ಥೆ, ಆರ್ಥಿಕತೆ, ಮಾನಸಿಕ ಆರೋಗ್ಯ ಮತ್ತು ದೈನಂದಿನ ವೈದ್ಯಕೀಯ ಆರೈಕೆಯ ಮೇಲೆ ಏಕಕಾಲದಲ್ಲಿ ಉಂಟುಮಾಡುವ ಭಾರಿ ತಲ್ಲಣಗಳ ಬಗ್ಗೆ ಕಳವಳ ಹೊಂದಿದ್ದಾರೆ,” ಎಂದಿದ್ದಾರೆ.
ಭಾರತದಂತಹ ದೇಶಗಳಲ್ಲಿ, ತಳಮಟ್ಟದ ರೋಗ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ಪ್ರಯೋಗಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು ಮತ್ತು ಸಣ್ಣ ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ನಿಗಾ (Critical Care) ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. “ನಾವು ವೇಗದ ರೋಗನಿರ್ಣಯ ವಿಧಾನಗಳು, ದಕ್ಷ ದತ್ತಾಂಶ ಹಂಚಿಕೆ ವ್ಯವಸ್ಥೆ ಮತ್ತು ಲಸಿಕೆಗಳು ಹಾಗೂ ಚಿಕಿತ್ಸೆಗಳ ಸಮಾನ ವಿತರಣೆಯನ್ನು ಹೊಂದಿರಬೇಕು,” ಎಂದು ಡಾ. ಬೂರುಗು ಪ್ರತಿಪಾದಿಸಿದ್ದಾರೆ.
ಡಾ. ಸುಂದರ್ ಅವರ ಪ್ರಕಾರ, ಭಾರತವು ಪ್ರಸ್ತುತ ಎರಡು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. “ಒಂದೆಡೆ ಹೊಸದಾಗಿ ಹರಡುತ್ತಿರುವ ವೈರಲ್ ಸೋಂಕುಗಳು ಮತ್ತು ಡೆಂಗ್ಯೂ, ಇನ್ಫ್ಲುಯೆಂಜಾ ಅಥವಾ ಜೂನೋಟಿಕಾ (ಪ್ರಾಣಿಗಳಿಂದ ಹರಡುವ) ಕಾಯಿಲೆಗಳಿದ್ದರೆ; ಮತ್ತೊಂದೆಡೆ ಮಧುಮೇಹ ಮತ್ತು ಹೃದಯರೋಗದಂತಹ ಜೀವನಶೈಲಿ ಆಧಾರಿತ ಸಮಸ್ಯೆಗಳು ಜನರನ್ನು ತೀವ್ರವಾದ ಸೋಂಕುಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡುತ್ತಿವೆ. ನಗರಗಳಲ್ಲಿನ ಅತಿಯಾದ ಜನಸಂಖ್ಯೆ, ಮಾಲಿನ್ಯ ಮತ್ತು ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆಯಲ್ಲಿನ ಕೊರತೆಗಳು ರೋಗದ ಉಲ್ಬಣವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಬಹುದು. ಆದ್ದರಿಂದ ಲಸಿಕಾಕರಣದ ವ್ಯಾಪ್ತಿಯನ್ನು ಹೆಚ್ಚಿಸುವುದು, ನೈರ್ಮಲ್ಯವನ್ನು ಸುಧಾರಿಸುವುದು ಮತ್ತು ಸ್ಥಳೀಯ ಕಣ್ಗಾವಲು ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ನಿರ್ಣಾಯಕ ಹೆಜ್ಜೆಗಳಾಗಿವೆ,” ಎಂದು ಡಾ. ಸುಂದರ್ ಹೇಳಿದ್ದಾರೆ.
ಇಷ್ಟೆಲ್ಲಾ ಆದರೂ ಜಗತ್ತು ಇನ್ನು ಸರಿಯಾಗಿ ಕಲಿಯದ ಮತ್ತೊಂದು ಪ್ರಮುಖ ಪಾಠವೆಂದರೆ ‘ಆರೋಗ್ಯ ಸಮಾನತೆ’ (Health Equity). “ಇತ್ತೀಚಿನ ಎಂಪಾಕ್ಸ್ (mpox) ರೋಗದ ಉಲ್ಬಣದ ಸಮಯದಲ್ಲಿ, ಅನೇಕ ಕಡಿಮೆ ಆದಾಯ ಹೊಂದಿರುವ ದೇಶಗಳು ಮತ್ತೊಮ್ಮೆ ಲಸಿಕೆ ವಿಳಂಬ ಮತ್ತು ವೈದ್ಯಕೀಯ ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದವು. ಜಾಗತಿಕ ಆರೋಗ್ಯ ವ್ಯವಸ್ಥೆಯಲ್ಲಿ ಇನ್ನೂ ಅಸಮಾನತೆ ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದರ ಜೊತೆಗೆ, ತಪ್ಪು ಮಾಹಿತಿ (Misinformation) ಮತ್ತು ಆರೋಗ್ಯ ಅಧಿಕಾರಿಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವುದು ರೋಗ ನಿಯಂತ್ರಣವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ.”
ಸಾಂಕ್ರಾಮಿಕ ರೋಗದ ಸಿದ್ಧತೆ ಎಂದರೆ ಕೇವಲ ಆಸ್ಪತ್ರೆಗಳು ಮತ್ತು ಔಷಧಿಗಳಷ್ಟೇ ಅಲ್ಲ. ಇದು ಸಾರ್ವಜನಿಕ ಜಾಗೃತಿ, ವೈಜ್ಞಾನಿಕ ಸಹಕಾರ, ಪರಸ್ಪರ ನಂಬಿಕೆ ಮತ್ತು ಸಕಾಲಿಕ ಕ್ರಮಗಳನ್ನು ಒಳಗೊಂಡಿರುತ್ತದೆ. ಇಲ್ಲದಿದ್ದರೆ, ಭವಿಷ್ಯದ ರೋಗಗಳ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು ಇನ್ನೂ ಭೀಕರವಾಗಿರಲಿವೆ.
ಕೊನೆಯದಾಗಿ ಮಾತನಾಡಿದ ಡಾ. ಸುಂದರ್, “ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆಯುವುದು, ವೈದ್ಯರ ಚೀಟಿ ಇಲ್ಲದೆ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು, ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ರೋಗದ ಲಕ್ಷಣಗಳ ಬಗ್ಗೆ ಗಮನ ಹರಿಸುವಂತಹ ಸರಳ ಅಭ್ಯಾಸಗಳು ರೋಗ ಹರಡುವಿಕೆಯನ್ನು ಗಣನೀಯವಾಗಿ ತಡೆಯಬಲ್ಲವು. ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಭಯಭೀತ ಸುದ್ದಿಗಳನ್ನು ನಂಬುವ ಬದಲು, ವಿಶ್ವಾಸಾರ್ಹ ವೈದ್ಯಕೀಯ ಮಾಹಿತಿಯನ್ನು ಹುಡುಕಬೇಕು. ಏಕೆಂದರೆ ಕೆಲವೊಮ್ಮೆ ವೈರಸ್‌ಗಳಿಗಿಂತ ವೇಗವಾಗಿ ಭೀತಿ (Panic) ಹರಡುತ್ತದೆ ಮತ್ತು ತಪ್ಪು ಮಾಹಿತಿಯೇ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಆಪತ್ತಾಗಿ ಪರಿಣಮಿಸುತ್ತದೆ,” ಎಂದು ಕಿವಿಮಾತು ಹೇಳಿದ್ದಾರೆ.








