ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಾದ್ಯಂತ ಜೂನ್ 1ರಿಂದ ಶಾಲೆಗಳು ಪ್ರಾರಂಭಗೊಳ್ಳುತ್ತಿದ್ದು, ಶಾಲಾ ಆರಂಭೋತ್ಸವದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದ ಸ್ವಾಮಿ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದಾಖಲಾದ ಎಲ್ಲಾ ಮಕ್ಕಳಿಗೆ ಪುಸ್ತಕ ವಿತರಣೆ
2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತವಾಗಿ ಮತ್ತು ಖಾಸಗಿ ಶಾಲೆಗಳಿಗೆ ನಿಗದಿತ ಬೆಲೆಯಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಇವುಗಳನ್ನು ಈಗಾಗಲೇ ಸಿ.ಆರ್.ಪಿ.ಗಳ (CRP) ಮೂಲಕ ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಜೂನ್ 1ರಂದೇ ದಾಖಲಾದ ಎಲ್ಲಾ ಮಕ್ಕಳಿಗೆ ಪುಸ್ತಕ ವಿತರಿಸುವಂತೆ ಮತ್ತು ಶಿಕ್ಷಕರು ಸಿಆರ್‌ಪಿಗಳ ಮೂಲಕ ಪುಸ್ತಕ ಪಡೆದು ಸಮರ್ಪಕವಾಗಿ ದಾಖಲಿಸಿಕೊಳ್ಳುವಂತೆ ಬಿಇಓ ಸೂಚನೆ ನೀಡಿದರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಇಂದಿನಿಂದಲೇ ತಯಾರಿ
ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯುತ್ತಮವಾಗಿ ಬಂದಿದೆ. ಮುಂಬರುವ 2026-27ನೇ ಸಾಲಿನಲ್ಲಿ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ತರಲು ಶಾಲಾರಂಭದ ದಿನದಿಂದಲೇ ಅಗತ್ಯ ಗಮನ ಹರಿಸುವಂತೆ ಪ್ರೌಢಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ತಾಲ್ಲೂಕಿನ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಓಂಕಾರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್. ನಾಯ್ಕ್, ರಮೇಶ್, ಕುಮಾರಸ್ವಾಮಿ, ವಿ.ಟಿ.ಸ್ವಾಮಿ ಸೇರಿದಂತೆ ಇಲಾಖೆಯ ಪ್ರಮುಖರು ಹಾಜರಿದ್ದರು.
ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸವಾಗಲಿ: ಸಾಗರದಲ್ಲಿ ಮಾ.ಸ. ನಂಜುಂಡಸ್ವಾಮಿ ಕರೆ








