ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸೋಮವಾರ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದ ಪ್ರತಿಭಟನಾಕಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಂತೆಯೇ ರಾಜ್ಯದಲ್ಲೂ ಕಲ್ಲು ತೂರಾಟವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುವುದು ಎಂದು ಪ್ರತಿಪಾದಿಸಿದ್ದಾರೆ.
ಪ್ರಾಣಿ ವಧೆ ನಿಷೇಧ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ಹಾಗೂ ಕಾರ್ಖಾನೆಯೊಂದರ ಧ್ವಂಸದಂತಹ ಸರ್ಕಾರದ ಕ್ರಮಗಳ ವಿರುದ್ಧ ಕೋಲ್ಕತ್ತಾದ ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿ ಮತ್ತು ವಾಹನಗಳನ್ನು ಜಖಂಗೊಳಿಸಿದ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.
ಪಾರ್ಕ್ ಸರ್ಕಸ್‌ನ ಡೆಪ್ಯುಟಿ ಕಮಿಷನರ್ ಕಚೇರಿಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳು ಹಾಗೂ ಗಾಯಗೊಂಡ ಸಿಬ್ಬಂದಿಯನ್ನು ಭೇಟಿಯಾದ ನಂತರ ಮಾತನಾಡಿದ ಅಧಿಕಾರಿ ಅವರು, ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಕಠಿಣ ನಿಲುವು ವ್ಯಕ್ತಪಡಿಸಿದರು. ಅಲ್ಲದೆ, ಬಿಜೆಪಿ ಸರ್ಕಾರವು ಯಾವುದೇ ಕಾರಣಕ್ಕೂ “ಗೂಂಡಾಗಿರಿ ಮತ್ತು ದೇಶವಿರೋಧಿ ಚಟುವಟಿಕೆಗಳನ್ನು” ಸಹಿಸುವುದಿಲ್ಲ ಎಂದು ದೃಢವಾಗಿ ಹೇಳಿದರು.
”ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಸಿಆರ್‌ಪಿಎಫ್ (CRPF) ಜವಾನರನ್ನು ಭೇಟಿ ಮಾಡಲು ಹಾಗೂ ಅವರ ಗಾಯಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಿನ್ನೆ ನಮ್ಮ ಇಡೀ ಪಡೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿದೆ, ದೊಡ್ಡ ದುರಂತವನ್ನು ತಪ್ಪಿಸಿದೆ ಮತ್ತು ಜನರನ್ನು ರಕ್ಷಿಸಿದೆ. ಸರ್ಕಾರವು ಅವರೊಂದಿಗೆ ದೃಢವಾಗಿ ನಿಂತಿದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ,” ಎಂದು ಸುವೇಂದು ಅಧಿಕಾರಿ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಿದರು.
ಜನರಿಗೆ ಪ್ರತಿಭಟನೆ ನಡೆಸುವ ಹಕ್ಕಿದ್ದರೂ, ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಕಲ್ಲು ತೂರಾಟ ನಡೆಸುವ ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಂಗಾಳದ ಸಿಎಂ ಹೇಳಿದರು. ಇದೇ ವೇಳೆ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಲಿಕೆ ಮಾಡಿದರು.
”ಶ್ರೀನಗರ ಮತ್ತು ಕಾಶ್ಮೀರದಲ್ಲಿ ಪೊಲೀಸರ ಮೇಲಿನ ಕಲ್ಲು ತೂರಾಟ ನಿಂತಿದೆ; ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತಾದಲ್ಲೂ ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ,” ಎಂದರು. ಅಲ್ಲದೆ, ಭಾನುವಾರ ನಡೆದ ಅಶಾಂತಿ “ಪೂರ್ವ ನಿಯೋಜಿತ” ಆಗಿತ್ತು ಎಂದು ಕರೆದ ಅಧಿಕಾರಿ, ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಮುಂಚಿತವಾಗಿಯೇ ಜನರನ್ನು ಒಟ್ಟುಗೂಡಿಸಿರುವುದನ್ನು ಸೂಚಿಸುತ್ತವೆ ಎಂದು ಹೇಳಿದರು.
ಹಿಂದಿನ ತೃಣಮೂಲ ಕಾಂಗ್ರೆಸ್ (TMC) ಆಡಳಿತದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಪೊಲೀಸರು ಗಾಯಗೊಳ್ಳುತ್ತಿದ್ದರೆ ಇತ್ತ ಪೊಲೀಸ್ ಮಂತ್ರಿ ಹವಾನಿಯಂತ್ರಿತ (AC) ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದ ದಿನಗಳು ಈಗ ಮುಗಿದಿವೆ,” ಎಂದರು.
”ನಾನು ಒಂದು ಮನವಿ ಮಾಡುತ್ತಿದ್ದೇನೆ – ಇಂತಹ ಕೆಲಸಗಳನ್ನು ಪುನರಾವರ್ತಿಸಬೇಡಿ. ಇದನ್ನು ಸೂಕ್ಷ್ಮವಾಗಿ ಆಲಿಸಿ, ಇದು ಈ ರೀತಿಯ ಮೊದಲ ಮತ್ತು ಕೊನೆಯ ಘಟನೆಯಾಗಬೇಕು. ಇವುಗಳು ಮತ್ತೆ ಮರುಕಳಿಸಲು ನಾವು ಬಿಡುವುದಿಲ್ಲ. ಇದನ್ನು ಕೊನೆಯ ಎಚ್ಚರಿಕೆ ಎಂದು ಪರಿಗಣಿಸಿ. ಇಂತಹ ಘಟನೆಗಳು ಮರುಕಳಿಸಿದರೆ, ಗೃಹ ಮಂತ್ರಿಯಾಗಿ ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ,” ಎಂದು ಅವರು ಎಚ್ಚರಿಸಿದರು.
ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪಾರ್ಕ್ ಸರ್ಕಸ್‌ನ ಸೆವೆನ್-ಪಾಯಿಂಟ್ ಕ್ರಾಸಿಂಗ್‌ನಲ್ಲಿ ಪ್ರತಿಭಟನಾಕಾರರ ಗುಂಪೊಂದು ಜಮಾಯಿಸಿ, ಸಾರ್ವಜನಿಕ ರಸ್ತೆಗಳಲ್ಲಿ ಅಜಾನ್ ಮತ್ತು ನಮಾಜ್‌ಗೆ ಸಂಬಂಧಿಸಿದ ಇತ್ತೀಚಿನ ನಿರ್ಬಂಧಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ಕ್ರಮಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಗುರಿಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಕಾರಣ ರಸ್ತೆಗಳನ್ನು ಮುಕ್ತಗೊಳಿಸಲು ಮತ್ತು ಜನರನ್ನು ಚದುರಿಸಲು ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ಮುಖಾಮುಖಿಯ ಸಂದರ್ಭದಲ್ಲಿ, ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಧ್ವಂಸಗೊಳಿಸಿದರು.
ಈ ಹಿಂಸಾಚಾರದಲ್ಲಿ ಆರು ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಸಿಆರ್‌ಪಿಎಫ್ ಜವಾನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದು, ಇದುವರೆಗೆ 40 ಜನರನ್ನು ಬಂಧಿಸಲಾಗಿದೆ ಮತ್ತು ತನಿಖೆಯನ್ನು ಪೊಲೀಸ್ ಕಮಿಷನರ್ ಅವರೇ ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೆಳಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯ ಬೃಹತ್ ಪಡೆಯನ್ನು ನಿಯೋಜಿಸಲಾಗಿದೆ.








