ಗೊರಖ್‌ಪುರ: ಉತ್ತರ ಪ್ರದೇಶದ ಗೊರಖ್‌ಪುರದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಲಕಲಕುವ ಘಟನೆ ನಡೆದಿದೆ.
ಅಲಿಗಢ ಮೂಲದ ಈ ವಿದ್ಯಾರ್ಥಿ, ದೀನ್ ದಯಾಳ್ ಉಪಾಧ್ಯಾಯ ಗೊರಖ್‌ಪುರ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿ.ಟೆಕ್ ಓದುತ್ತಿದ್ದನು. ರಾಮಗಢತಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರದಲ್ಲಿರುವ ಖಾಸಗಿ ಹುಡುಗರ ಹಾಸ್ಟೆಲ್‌ನಲ್ಲಿ ಈತ ವಾಸವಿದ್ದನು.
ಗುರುವಾರ ಬೆಳಿಗ್ಗೆ ವಿದ್ಯಾರ್ಥಿ ತನ್ನ ಕೊಠಡಿಯಿಂದ ಹೊರಬರದಿದ್ದಾಗ ಅನುಮಾನಗೊಂಡ ಹಾಸ್ಟೆಲ್ ವಾರ್ಡನ್ ಆತನನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ರಾಮಗಢತಾಲ್ ಪೊಲೀಸರು ಬಾಗಿಲು ಮುರಿದು ಒಳಹೋದಾಗ, ವಿದ್ಯಾರ್ಥಿ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರಿಗೆ ವಿದ್ಯಾರ್ಥಿ ಬರೆದಿದ್ದ ಒಂದು ಪುಟದ ಡೆತ್‌ನೋಟ್ ಲಭ್ಯವಾಗಿದೆ. ನಾನು ಒಬ್ಬ ಒಳ್ಳೆಯ ಮಗನಾಗಲು ಅಥವಾ ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯವಾಗಲಿಲ್ಲ. ಪೋಷಕರ ನಿರೀಕ್ಷೆಗಳನ್ನು ತಲುಪಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಕ್ಷಮೆಯಿರಲಿ. ಮುಂದಿನ ಜನ್ಮದಲ್ಲೂ ನಿಮ್ಮ ಮಗನಾಗಿಯೇ ಹುಟ್ಟಿಬಂದು, ನಿಮ್ಮ ಎಲ್ಲಾ ಕನಸುಗಳನ್ನು ನನಸು ಮಾಡುತ್ತೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.








