ಇಸ್ಲಾಮಾಬಾದ್: ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ನೀಡಿದ್ದ ಪ್ರಸ್ತಾವನೆಗೆ ಇರಾನ್ ಭಾನುವಾರ ತನ್ನ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದೆ. ಸಂಧಾನಕಾರನ ಪಾತ್ರ ವಹಿಸಿರುವ ಪಾಕಿಸ್ತಾನಕ್ಕೆ ಇರಾನ್ ತನ್ನ ಉತ್ತರವನ್ನು ಹಸ್ತಾಂತರಿಸಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿ ‘ಹಾರ್ಮುಜ್ ಜಲಸಂಧಿ’ಯಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವ ಸುಳಿವು ನೀಡಿದೆ.
ಇರಾನ್‌ನ ಇರಾನ್ ನ್ಯೂಸ್ ಏಜೆನ್ಸಿ (IRNA) ವರದಿ ಮಾಡಿರುವಂತೆ, ಇರಾನ್ ನೀಡಿದ ಪ್ರತಿಕ್ರಿಯೆಯು ಪ್ರಮುಖವಾಗಿ ಈ ಭಾಗದಲ್ಲಿ ಶತ್ರುತ್ವವನ್ನು ಕೊನೆಗಾಣಿಸುವುದು ಮತ್ತು ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಯುದ್ಧ ನಿಲ್ಲಿಸುವುದರ ಮೇಲೆ ಕೇಂದ್ರೀಕೃತವಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಭಾಗಶಃ ಬಂದ್ ಮಾಡಿತ್ತು. ಈಗ ಅಮೆರಿಕದ ಪ್ರಸ್ತಾವನೆಗೆ ಸ್ಪಂದಿಸಿರುವ ಇರಾನ್, ಶಾಂತಿ ಮಾತುಕತೆ ಮುಂದುವರಿದರೆ ಈ ಜಲಸಂಧಿಯಲ್ಲಿ ಸುರಕ್ಷಿತ ಹಡಗು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ತಿಳಿಸಿದೆ.
ಪಾಕಿಸ್ತಾನವು ಈ ಸಂಧಾನ ಪ್ರಕ್ರಿಯೆಯಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇರಾನ್‌ನಿಂದ ಪ್ರತಿಕ್ರಿಯೆ ಬಂದಿರುವುದನ್ನು ಖಚಿತಪಡಿಸಿದ್ದು, ಅದನ್ನು ಅಮೆರಿಕಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.








