ಪೆಶಾವರ್: ಪಾಕಿಸ್ತಾನದ ವಾಯವ್ಯ ಭಾಗದ ಬನ್ನು ಜಿಲ್ಲೆಯಲ್ಲಿ ಭದ್ರತಾ ಪಡೆಯ ಚೆಕ್‌ಪೋಸ್ಟ್ ಗುರಿಯಾಗಿಸಿ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಸ್ಫೋಟಕ ತುಂಬಿದ್ದ ವಾಹನವನ್ನು ಭದ್ರತಾ ಪಡೆಯ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಮೂಲಕ ಈ ವಿಧ್ವಂಸಕ ಕೃತ್ಯ ಎಸಗಲಾಗಿದೆ.
ಶನಿವಾರ ತಡರಾತ್ರಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯ ಫತೇ ಖೇಲ್ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಈ ದಾಳಿ ನಡೆದಿದೆ. ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ನೇರವಾಗಿ ಚೆಕ್‌ಪೋಸ್ಟ್‌ನ ಗೋಡೆಗೆ ಡಿಕ್ಕಿ ಹೊಡೆಸಿದ್ದು, ಸ್ಫೋಟದ ತೀವ್ರತೆಗೆ ಇಡೀ ಕಟ್ಟಡವೇ ಕುಸಿದು ಬಿದ್ದಿದೆ.
ಆರಂಭದಲ್ಲಿ ಕಡಿಮೆ ಸಾವುಗಳು ವರದಿಯಾಗಿದ್ದರೂ, ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದ ನಂತರ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಜ್ಜಾದ್ ಖಾನ್ ತಿಳಿಸಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕಿಸ್ತಾನಿ ತಾಲಿಬಾನ್ (TTP) ಸಂಘಟನೆಯಿಂದ ಹೊರಬಂದಿರುವ ಹೊಸ ಬಂಡುಕೋರ ಗುಂಪು ‘ಇತ್ತೆಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್’ (IMP) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತಾನು TTP ಇಂದ ಬೇರ್ಪಟ್ಟ ಗುಂಪು ಎಂದು ಇದು ಹೇಳಿಕೊಂಡಿದ್ದರೂ, ಅಧಿಕಾರಿಗಳು ಇದನ್ನು TTP ಯೇ ನಡೆಸುತ್ತಿರುವ ಮತ್ತೊಂದು ಮುಖವಾಡ ಎಂದು ಶಂಕಿಸಿದ್ದಾರೆ.








