ಬೆಂಗಳೂರು : ಈಗಾಗಲೇ ಶೇಕಡ 50ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿ ಗೊಳಿಸಿದ್ದು, ಮುಂದಿನ ವರ್ಷ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಜೀರುಂಡೆ ಪುಸ್ತಕ ಪ್ರಕಾಶನ ಭಾನುವಾರ ಚಾಮರಾಜಪೇ ಟೆಯ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕಂಚ ಐಲಯ್ಯ ಅವರ ‘ಶೂದ್ರ ಬಂಡಾಯ’ ಕನ್ನಡ ಅನುವಾದ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಪರಿಚಯಿಸಿದಾಗ ತಮ್ಮ ವಿರುದ್ಧ ಟೀಕೆಗಳು ಕೇಳಿಬಂದವು. ಆದರೆ ನಾವು ದ್ವಿಭಾಷಾ ಶಿಕ್ಷಣದ ಪರವಾಗಿದ್ದೇವೆ. ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಆಯ್ಕೆ ಮಾಡುವ ಹಕ್ಕು ಪೋಷಕರಿಗೆ ಇರಬೇಕು ಎಂದರು. ಸಮಾನತೆಗೆ ಶಿಕ್ಷಣವೇ ಪ್ರಬಲ ಅಸ್ತ್ರ. ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಪ್ರಬಲ ಅಸ್ತ್ರ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ. ಶೂದ್ರ ಬಂಡಾಯದಂತಹ ಕೃತಿಗಳು ಓದುಗರಲ್ಲಿ ವೈಚಾರಿಕ ಕ್ರಾಂತಿ ಉಂಟು ಮಾಡುತ್ತವೆ. ಇಂಥ ಸಾಮಾಜಿಕ ಕಳಕಳಿಯ ಕೃತಿಗಳು ನಮ್ಮ ಆಲೋಚನೆಗಳಿಗೆ ಬಲ ತುಂಬುತ್ತವೆ ಎಂದು ಬಣ್ಣಿಸಿದರು.
ದ್ವಿಭಾಷಾ ನೀತಿಯಿಂದಾಗಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಭಾಷೆಯ ಕಲಿಕೆಗೂ ಆದ್ಯತೆ ನೀಡಲಾಗುತ್ತದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಲಿದೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲೇ ಪಡೆಯುವಂತಾಗಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.








