ಶಿವಮೊಗ್ಗ: ದಿನದಿಂದ ದಿನಕ್ಕೆ ಪೆಟ್ರೋಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ, ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ವಿನೂತನ ಕಳ್ಳರ ಗ್ಯಾಂಗ್ ಒಂದು ಸಾಗರ ನಗರದಲ್ಲಿ ಸಕ್ರಿಯವಾಗಿದೆ. ತುರ್ತು ಕೆಲಸಗಳ ನಿಮಿತ್ತ ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ನಿಲ್ಲಿಸಿ ಹೋಗುವ ಸವಾರರೇ ಈ ಗ್ಯಾಂಗ್‌ನ ಮುಖ್ಯ ಟಾರ್ಗೆಟ್. ಸದ್ಯ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ರಾತ್ರೋರಾತ್ರಿ ಬೈಕ್‌ಗಳಿಂದ ಪೆಟ್ರೋಲ್ ಕದಿಯುವ ತಂಡವೊಂದು ಹುಟ್ಟಿಕೊಂಡಿದ್ದು, ಸಾರ್ವಜನಿಕರಲ್ಲಿ ಭಾರಿ ಆತಂಕ ಮೂಡಿಸಿದೆ.
ಜಂಬಗಾರು ರೈಲ್ವೆ ನಿಲ್ದಾಣವೇ ಕಳ್ಳರ ಅಡ್ಡೆ!
ಸಾಗರ ಪೇಟೆ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಇರುವ ಜಂಬಗಾರು ರೈಲ್ವೆ ನಿಲ್ದಾಣದ ಬಳಿ ಈ ಪೆಟ್ರೋಲ್ ಕಳ್ಳತನ ದಂಧೆ ಮಿತಿಮೀರಿದೆ. ಪ್ರತಿದಿನ ನೂರಾರು ಪ್ರಯಾಣಿಕರು ತುರ್ತು ಕೆಲಸದ ನಿಮಿತ್ತ ರೈಲ್ವೆ ನಿಲ್ದಾಣದ ಮುಂದೆ ತಮ್ಮ ಬೈಕ್‌ಗಳನ್ನು ಪಾರ್ಕ್ ಮಾಡಿ ಬೇರೆ ಊರುಗಳಿಗೆ ತೆರಳುತ್ತಾರೆ. ಆದರೆ, ಕಳ್ಳರು ಈ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ವಾಹನ ಸವಾರರು ಏನಾದರೂ ರಾತ್ರಿ ವೇಳೆ ಮರಳಿ ಬಾರದಿದ್ದರೆ, ಬೆಳಗಾಗುವುದರೊಳಗೆ ಅವರ ಬೈಕ್‌ನಲ್ಲಿನ ಇಂಧನ ಮಾಯವಾಗಿರುತ್ತದೆ! ಕೆಲಸ ಮುಗಿಸಿ ರೈಲಿನಿಂದ ಇಳಿದು ಮನೆಗೆ ಹೋಗೋಣ ಎಂದು ಬೈಕ್ ಸ್ಟಾರ್ಟ್ ಮಾಡಲು ಹೋದ ಸವಾರರು, ಪೆಟ್ರೋಲ್ ಟ್ಯಾಂಕ್ ಸಂಪೂರ್ಣ ಖಾಲಿಯಾಗಿರುವುದನ್ನು ಕಂಡು ದಿಕ್ಕೆಟ್ಟು ಹೋಗುತ್ತಿದ್ದಾರೆ. ಬೇರೆ ದಾರಿಯಿಲ್ಲದೆ ಮಧ್ಯರಾತ್ರಿಯಲ್ಲೇ ಬೈಕ್ ತಳ್ಳಿಕೊಂಡು ಸಮೀಪದ ಪೆಟ್ರೋಲ್ ಬಂಕ್‌ಗೆ ಅಲೆಯುವ ದುಸ್ಥಿತಿ ಸವಾರರಿಗೆ ಎದುರಾಗಿದೆ.
ಮಧ್ಯರಾತ್ರಿ 1.30ರ ನಂತರ ಆಕ್ಟೀವ್ ಆಗುವ ಗ್ಯಾಂಗ್
ಸ್ಥಳೀಯರ ಮಾಹಿತಿಯ ಪ್ರಕಾರ, ಮಧ್ಯರಾತ್ರಿ 1.30ರ ನಂತರ ಈ ಪೆಟ್ರೋಲ್ ಖದೀಮರ ಗ್ಯಾಂಗ್ ಜಂಬಗಾರು ರೈಲ್ವೆ ನಿಲ್ದಾಣದ ಬಳಿ ಸಕ್ರಿಯವಾಗುತ್ತದೆ. ನಾಲ್ಕೈದು ಜನರಿರುವ ಈ ಕಳ್ಳರ ತಂಡ, ಕೈಯಲ್ಲಿ ಖಾಲಿ ವಾಟರ್ ಬಾಟಲಿಗಳನ್ನು ಹಿಡಿದು ಬರುತ್ತಾರೆ. ಅತ್ಯಂತ ಚಾಣಾಕ್ಷತನದಿಂದ ಬೈಕ್‌ಗಳ ಪೆಟ್ರೋಲ್ ಪೈಪ್‌ಗಳನ್ನು ಕಿತ್ತು, ನಿಮಿಷಗಳಲ್ಲಿ ಲೀಟರ್‌ಗಟ್ಟಲೆ ಪೆಟ್ರೋಲ್ ಕದ್ದು ಪರಾರಿಯಾಗುತ್ತಾರೆ. ಮಧ್ಯರಾತ್ರಿ ರೈಲು ಹತ್ತಲು ಬರುವ ಕೆಲವು ಪ್ರಯಾಣಿಕರು ಕಳ್ಳರ ಈ ಕೃತ್ಯವನ್ನು ಕಣ್ಣಾರೆ ಕಂಡಿದ್ದಾರೆ ಎನ್ನಲಾಗಿದೆ.
ಕಳ್ಳತನಕ್ಕೆ ಪೂರಕವಾದ ಕತ್ತಲು ಮತ್ತು ಸಿಸಿಟಿವಿ ಕೊರತೆ
ಸಾಗರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತುತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಕಾರಣಕ್ಕಾಗಿ ನಿಲ್ದಾಣದ ಮುಂಭಾಗದಲ್ಲಿ ಸೂಕ್ತ ಬೆಳಕಿನ (ಸ್ಟ್ರೀಟ್ ಲೈಟ್) ವ್ಯವಸ್ಥೆ ಇಲ್ಲವಾಗಿದೆ. ಇದರೊಂದಿಗೆ ಸಿಸಿಟಿವಿ (CCTV) ಕ್ಯಾಮೆರಾಗಳ ಕಣ್ಗಾವಲು ಇಲ್ಲದಿರುವುದು ಈ ಪೆಟ್ರೋಲ್ ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಕತ್ತಲನ್ನು ಆಸರೆಯಾಗಿಸಿಕೊಂಡು ಕಳ್ಳರು ರಾಜಾರೋಷವಾಗಿ ತಮ್ಮ ಕೈಚಳಕ ತೋರುತ್ತಿದ್ದಾರೆ.
ಎಎಸ್ಪಿ ಡಾ. ಬೆನಕ ಪ್ರಸಾದ್ ಅವರಿಗೆ ಸವಾರರ ಮನವಿ
ಸಾಗರ ಉಪವಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ನಿಯಂತ್ರಣಕ್ಕೆ ಐಪಿಎಸ್ ಅಧಿಕಾರಿ, ಎಎಸ್ಪಿ ಡಾ. ಬೆನಕ ಪ್ರಸಾದ್ ಅವರು ಈಗಾಗಲೇ ಹಲವು ಖಡಕ್ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದರೆ, ಪೊಲೀಸ್ ಠಾಣೆಯ ಸನಿಹದಲ್ಲೇ ನಡೆಯುತ್ತಿರುವ ಈ ಪೆಟ್ರೋಲ್ ದಂಧೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಬೈಕ್ ಸವಾರರ ಪ್ರಮುಖ ಬೇಡಿಕೆಗಳು:
-
ಗಸ್ತು ಹೆಚ್ಚಳ: ಮಧ್ಯರಾತ್ರಿಯ ಅವಧಿಯಲ್ಲಿ ರೈಲ್ವೆ ಮತ್ತು ಬಸ್ ನಿಲ್ದಾಣದ ಸುತ್ತಮುತ್ತ ಪೊಲೀಸ್ ಬಿಟ್ ಹಾಗೂ ನೈಟ್ ಪೆಟ್ರೋಲಿಂಗ್ (ಗಸ್ತು) ಅನ್ನು ಚುರುಕುಗೊಳಿಸಬೇಕು.
-
ಬೆಳಕಿನ ವ್ಯವಸ್ಥೆ: ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ ನಿಲ್ದಾಣದ ಮುಂಭಾಗದಲ್ಲಿ ತಕ್ಷಣವೇ ಸೂಕ್ತ ಬೀದಿ ದೀಪಗಳನ್ನು ಅಳವಡಿಸಬೇಕು.
-
CCTV ಅಳವಡಿಕೆ: ವಾಹನ ಪಾರ್ಕಿಂಗ್ ಮಾಡುವ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಳ್ಳರ ಪತ್ತೆಗೆ ಕ್ರಮ ವಹಿಸಬೇಕು.
ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ದಿನಬೆಳಗಾದರೆ ದುಡಿದು ಬದುಕುವ ಜನಸಾಮಾನ್ಯರಿಗೆ ಈ ಪೆಟ್ರೋಲ್ ಕಳ್ಳರ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು, ಸಾಗರದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಈ ಪೆಟ್ರೋಲ್ ಕದಿಯೋ ಗ್ಯಾಂಗ್‌ಗೆ ಬ್ರೇಕ್ ಹಾಕಿ, ಕಳ್ಳರನ್ನು ಮಟ್ಟ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ








