ಡೆನ್ವರ್ (ಯುಎಸ್ಎ): ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಮೇಲೆ ಸಂಭವಿಸಿದ ಅತಿ ಅಪರೂಪದ ಮತ್ತು ಆಘಾತಕಾರಿ ಅಪಘಾತವೊಂದರಲ್ಲಿ, ಟೇಕ್ ಆಫ್ ಆಗುತ್ತಿದ್ದ ವಿಮಾನವು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಶುಕ್ರವಾರ ತಡರಾತ್ರಿ 11:19ರ ಸುಮಾರಿಗೆ (ಸ್ಥಳೀಯ ಕಾಲಮಾನ) ಫ್ರಾಂಟಿಯರ್ ಏರ್‌ಲೈನ್ಸ್‌ನ (Frontier Airlines) ಫ್ಲೈಟ್ 4345 ಲಾಸ್ ಏಂಜಲೀಸ್‌ಗೆ ಹೊರಡಲು ಸಿದ್ಧವಾಗುತ್ತಿದ್ದಾಗ ಈ ಘಟನೆ ನಡೆದಿದೆ.
ವಿಮಾನವು ರನ್‌ವೇ ಮೇಲೆ ವೇಗವಾಗಿ ಚಲಿಸುತ್ತಿದ್ದಾಗ (ಸುಮಾರು 235 ಕಿ.ಮೀ ವೇಗ), ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬರು ರನ್‌ವೇ ದಾಟಲು ಮುಂದಾಗಿದ್ದಾರೆ. ವಿಮಾನದ ಎಂಜಿನ್ ಆ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಎಂಜಿನ್‌ನಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ.
ವಿಮಾನಕ್ಕೆ ಏನೋ ಡಿಕ್ಕಿ ಹೊಡೆದಿದೆ ಮತ್ತು ಎಂಜಿನ್‌ನಲ್ಲಿ ಬೆಂಕಿಯಿದೆ ಎಂದು ಅರಿತ ಪೈಲಟ್ ಕೂಡಲೇ ಟೇಕ್ ಆಫ್ ಅನ್ನು ಸ್ಥಗಿತಗೊಳಿಸಿ (Aborted Takeoff) ವಿಮಾನವನ್ನು ರನ್‌ವೇ ಮೇಲೆಯೇ ನಿಲ್ಲಿಸಿದ್ದಾರೆ. “ನಾವು ಯಾರೋ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದೇವೆ, ಎಂಜಿನ್‌ನಲ್ಲಿ ಬೆಂಕಿಯಿದೆ” ಎಂದು ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ರವಾನಿಸಿದ ಸಂದೇಶ ಈಗ ಬಹಿರಂಗವಾಗಿದೆ.








