ಸ್ಯಾನ್ ಫ್ರಾನ್ಸಿಸ್ಕೋ: ಪ್ರಮುಖ ಸೈಬರ್ ಸೆಕ್ಯೂರಿಟಿ ಮತ್ತು ಕ್ಲೌಡ್ ಮೂಲಸೌಕರ್ಯ ಸಂಸ್ಥೆಯಾದ ಕ್ಲೌಡ್‌ಫ್ಲೇರ್ (Cloudflare), ತನ್ನ ಜಾಗತಿಕ ಕಾರ್ಯಪಡೆಯ ಶೇಕಡಾ 20 ರಷ್ಟು ಅಂದರೆ ಸುಮಾರು 1,100 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ವಿಶೇಷವೆಂದರೆ, ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಆದಾಯ ಗಳಿಸಿದ್ದರೂ ಈ ನಿರ್ಧಾರ ಕೈಗೊಂಡಿರುವುದು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದಾಗಿ ಅನೇಕ ಹುದ್ದೆಗಳು ಈಗ ಅನಗತ್ಯವಾಗಿವೆ ಎಂದು ಕಂಪನಿ ಹೇಳಿದೆ.ಕಳೆದ ಮೂರು ತಿಂಗಳಲ್ಲಿ ಕಂಪನಿಯೊಳಗೆ AI ಬಳಕೆ 600% ರಷ್ಟು ಹೆಚ್ಚಾಗಿದ್ದು, ಸಾವಿರಾರು ಕೆಲಸಗಳನ್ನು AI ಏಜೆಂಟ್‌ಗಳೇ ನಿರ್ವಹಿಸುತ್ತಿವೆ ಎಂದು ಸಿಇಒ ಮ್ಯಾಥ್ಯೂ ಪ್ರಿನ್ಸ್ ತಿಳಿಸಿದ್ದಾರೆ.
ಇದು ವೆಚ್ಚ ಕಡಿತಕ್ಕಾಗಿ ಮಾಡಿದ ನಿರ್ಧಾರವಲ್ಲ, ಬದಲಿಗೆ ‘ಏಜೆಂಟಿಕ್ ಎಐ’ (Agentic AI) ಯುಗಕ್ಕೆ ತಕ್ಕಂತೆ ಕಂಪನಿಯನ್ನು ಮರುಸಂಘಟಿಸುವ ಪ್ರಯತ್ನ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕ್ಲೌಡ್‌ಫ್ಲೇರ್ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ $639.8 ಮಿಲಿಯನ್ (ಸುಮಾರು ₹5,300 ಕೋಟಿ) ಆದಾಯ ಗಳಿಸಿದೆ. ಇದು ಕಳೆದ ವರ್ಷಕ್ಕಿಂತ 34% ರಷ್ಟು ಹೆಚ್ಚಾಗಿದೆ. ಆದರೂ ಸಹ, ಕಂಪನಿಯು ಭವಿಷ್ಯದಲ್ಲಿ ಮಾನವ ಸಂಪನ್ಮೂಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಮುಂದಾಗಿದೆ.








