ನವದೆಹಲಿ: ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರಿಗೆ ಭಾರತೀಯ ಕುಸ್ತಿ ಫೆಡರೇಶನ್ (WFI) ಬಾರೀ ಆಘಾತ ನೀಡಿದೆ. ಶಿಸ್ತು ಉಲ್ಲಂಘನೆ ಮತ್ತು ಡೋಪಿಂಗ್ ನಿಯಮಗಳ ಪಾಲನೆಯಲ್ಲಿನ ಲೋಪಗಳನ್ನು ಉಲ್ಲೇಖಿಸಿ, ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಯಲಿರುವ ‘ರಾಷ್ಟ್ರೀಯ ಮುಕ್ತ ರ‍್ಯಾಂಕಿಂಗ್ ಟೂರ್ನಿ’ಯಿಂದ ಅವರನ್ನು ಹೊರಗಿಡಲಾಗಿದೆ.
ವಿನೇಶ್ ಫೋಗಟ್ ಅವರು ಜೂನ್ 26, 2026 ರವರೆಗೆ ಯಾವುದೇ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ ಎಂದು WFI ಘೋಷಿಸಿದೆ.
ಶೋಕಾಸ್ ನೋಟಿಸ್: ಫೆಡರೇಶನ್ ವಿನೇಶ್ ಅವರಿಗೆ 15 ಪುಟಗಳ ಸುದೀರ್ಘ ‘ಶೋಕಾಸ್ ನೋಟಿಸ್’ ನೀಡಿದ್ದು, 14 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೂಕದ ಸಮಸ್ಯೆಯಿಂದ ಅನರ್ಹಗೊಂಡು ದೇಶಕ್ಕೆ ಮುಜುಗರ ತಂದ ಆರೋಪ.ನಿವೃತ್ತಿಯ ನಂತರ ಮರಳಿ ಕಣಕ್ಕಿಳಿಯುವ ಮುನ್ನ ನೀಡಬೇಕಾದ ಕಡ್ಡಾಯ 6 ತಿಂಗಳ ಮುನ್ಸೂಚನೆಯನ್ನು (Notice Period) ಪೂರೈಸದಿರುವುದು.
ಡೋಪಿಂಗ್ ನಿಯಂತ್ರಣ ಅಧಿಕಾರಿಗಳಿಗೆ ತಮ್ಮ ಲಭ್ಯತೆಯ (Whereabouts) ಬಗ್ಗೆ ಸರಿಯಾದ ಮಾಹಿತಿ ನೀಡದೆ ಪರೀಕ್ಷೆಗೆ ಗೈರಾದ ಆರೋಪ.
ಪ್ಯಾರಿಸ್ ಒಲಿಂಪಿಕ್ಸ್‌ನ ಅನರ್ಹತೆಯ ನಂತರ ನಿವೃತ್ತಿ ಘೋಷಿಸಿದ್ದ ವಿನೇಶ್, ಬಳಿಕ ಅದನ್ನು ಹಿಂಪಡೆದು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗುರಿಯಾಗಿಸಿಕೊಂಡು ಕಣಕ್ಕಿಳಿಯಲು ಸಿದ್ಧರಾಗಿದ್ದರು. ನಾಳೆಯಿಂದ (ಮೇ 10) ಗೊಂಡಾದಲ್ಲಿ ನಡೆಯಲಿರುವ ಟೂರ್ನಿಯ ಮೂಲಕ ಅವರು ಕಮ್‌ಬ್ಯಾಕ್ ಮಾಡಬೇಕಿತ್ತು. ಆದರೆ WFI ಈ ನಿರ್ಧಾರದಿಂದ ಅವರ ಪುನರಾಗಮನಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.








