ಶಿವಮೊಗ್ಗ: ವಿಶ್ವವಿಖ್ಯಾತ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಎಸ್. ರಾಮಪ್ಪ ಅವರ 74ನೇ ಜನ್ಮದಿನವನ್ನು ಮೇ 13ರಂದು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಾಗರದ ಸಿಗಂದೂರು ಚೌಡಮ್ಮ ಎಜ್ಯುಕೇಷನಲ್ ಚಾರಿಟೆಬಲ್ ಟ್ರಸ್ಟ್‌ನ ವಿಜಯಕುಮಾರ್ ಹೆರಬೆಟ್ಟು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜನ್ಮದಿನವನ್ನು ಆಡಂಬರವಿಲ್ಲದೆ, ಬಡವರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಸೇವಾ ಕಾರ್ಯಗಳ ಮೂಲಕ ಆಚರಿಸಲಾಗುವುದು ಎಂದರು.
ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು:
-
ಆರೋಗ್ಯ ಶಿಬಿರ: ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಹೃದಯ ರೋಗ ತಪಾಸಣೆ ಮತ್ತು ಶ್ರವಣ ತಪಾಸಣೆ ಶಿಬಿರ.
-
ರಕ್ತದಾನ ಶಿಬಿರ: ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸ್ವಯಂಪ್ರೇರಿತ ರಕ್ತದಾನ.
-
ಶಾಲಾ ದತ್ತು ಮತ್ತು ಅಭಿವೃದ್ಧಿ: ‘ಶ್ರೀಕ್ಷೇತ್ರ ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಯತ್ತ’ ಯೋಜನೆಯಡಿ ಬೇರಾಳ ಸರ್ಕಾರಿ ಶಾಲೆಗೆ ‘ಬಣ್ಣ ದರ್ಪಣ’ ಕಾರ್ಯಕ್ರಮ.
-
ದಾನಧರ್ಮ: ಅನಾಥಾಶ್ರಮಗಳಿಗೆ ಸಾಮಗ್ರಿ ವಿತರಣೆ ಹಾಗೂ ಸಾಗರದ ಉಪವಿಭಾಗೀಯ ಮತ್ತು ಮಹಿಳಾ ಮಕ್ಕಳ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ.
-
ಉದ್ಯೋಗ ತರಬೇತಿ: ಅಗ್ನಿವೀರ್ ಮತ್ತು ಪ್ಯಾರಾ ಮಿಲಿಟರಿ ಸೇರಬಯಸುವ ಯುವಕರಿಗಾಗಿ ಉಚಿತ ಪೂರ್ವ ತಯಾರಿ ತರಬೇತಿ ಶಿಬಿರ.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮವು ಮೇ 13ರಂದು ಬೆಳಿಗ್ಗೆ 9 ಗಂಟೆಗೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಗ್ಯ ಶಿಬಿರ ಉದ್ಘಾಟಿಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ರಾಮಪ್ಪ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ಎಲ್ಲರಿಗೂ ಮಾದರಿ
ಅಭಿಮಾನಿ ಬಳಗದ ದೇವರಾಜ ಕಪ್ಪದೂರು ಮಾತನಾಡಿ, ಡಾ. ರಾಮಪ್ಪ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಅವರ ಸಾಮಾಜಿಕ ಸೇವೆಯನ್ನು ಗೌರವಿಸುವ ಸಲುವಾಗಿ ಈ ಸದುದ್ದೇಶದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಅಳೂರು, ಗಣೇಶ್ ಜಾಕಿ, ರವಿ ಹುರುಳಿ, ಉಮೇಶ್ ಹೆಸಿಗೆ ಹಾಗೂ ಗಿರೀಶ್ ಕೋವಿ ಉಪಸ್ಥಿತರಿದ್ದರು.
ಅಧಿಕಾರಿಗಳೇ ಎಚ್ಚರ, ಬಡವರ ಕೆಲಸದಲ್ಲಿ ವಿಳಂಬವಾದರೆ ಕ್ರಮ ಖಚಿತ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗು
Rain In Karnataka: ಮುಂದಿನ ಎರಡು ದಿನ ರಾಜ್ಯಾಧ್ಯಂತ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ








