ಗುರುವಾರದಂದು ಸುಪ್ರೀಂ ಕೋರ್ಟ್, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಂಗ ವಿಮರ್ಶೆಯ (Judicial Review) ವ್ಯಾಪ್ತಿ ಹೆಚ್ಚುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಂವಿಧಾನಿಕ ನ್ಯಾಯಾಲಯಗಳು ಧಾರ್ಮಿಕ ಆಚರಣೆಗಳಲ್ಲಿ ಪದೇ ಪದೇ ಅಥವಾ ವಿವೇಚನಾರಹಿತವಾಗಿ ಹಸ್ತಕ್ಷೇಪ ಮಾಡುವುದರಿಂದ ಧರ್ಮದ ಅಸ್ತಿತ್ವವೇ ಅಸ್ಥಿರಗೊಳ್ಳಬಹುದು ಎಂದು ಪೀಠವು ಆತಂಕ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠವು, “ಭಾರತದಂತಹ ನಾಗರಿಕತೆಯಲ್ಲಿ ನಂಬಿಕೆ ಮತ್ತು ಸಾಮಾಜಿಕ ಜೀವನ ಒಂದಕ್ಕೊಂದು ಬೆಸೆದುಕೊಂಡಿವೆ. ಭಾರತ ಪ್ರಗತಿ ಹೊಂದಬೇಕು, ಆದರೆ ನಮ್ಮಲ್ಲಿ ಕೆಲವು ‘ಸ್ಥಿರ’ (Constant) ಮೌಲ್ಯಗಳಿವೆ, ಅದನ್ನು ನಾವು ಮುರಿಯಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿತು.
“ಪ್ರತಿಯೊಂದು ಧಾರ್ಮಿಕ ಆಚರಣೆಯನ್ನು ಸಂವಿಧಾನಾತ್ಮಕವಾಗಿ ಪ್ರಶ್ನಿಸಲು ಶುರು ಮಾಡಿದರೆ, ಈ ನಾಗರಿಕತೆಯ ಕಥೆ ಏನಾಗಬಹುದು? ನೂರಾರು ಅರ್ಜಿಗಳು ಸಲ್ಲಿಕೆಯಾಗಿ ದೇವಸ್ಥಾನಗಳ ತೆರೆಯುವಿಕೆ ಮತ್ತು ಮುಚ್ಚುವಿಕೆಯಂತಹ ಪ್ರತಿಯೊಂದು ಸಣ್ಣ ವಿಚಾರವೂ ನ್ಯಾಯಾಲಯದ ಮೆಟ್ಟಿಲೇರಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಸುಂದರೇಶ್ ಅವರು, “ಇಂತಹ ಅರ್ಜಿಗಳನ್ನು ಸಾರಾಸಗಟಾಗಿ ಪುರಸ್ಕರಿಸಿದರೆ, ಪ್ರತಿಯೊಬ್ಬರೂ ಪ್ರತಿಯೊಂದನ್ನೂ ಪ್ರಶ್ನಿಸಬಹುದು. ಇದರಿಂದ ಪ್ರತಿ ಧರ್ಮವೂ ಒಡೆಯುತ್ತದೆ ಮತ್ತು ಸಂವಿಧಾನಿಕ ನ್ಯಾಯಾಲಯಗಳನ್ನು ಮುಚ್ಚಬೇಕಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.








