ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರು ಸೈಬರ್ ಅಪರಾಧ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.
ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ ಬೆಂಗಳೂರಿನಲ್ಲಿ ಒಟ್ಟು 17,561 ಸೈಬರ್ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ದಾಖಲಾಗಿದ್ದ 17,631 ಪ್ರಕರಣಗಳಿಗೆ ಹೋಲಿಸಿದರೆ ಈ ಬಾರಿ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.
ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಒಟ್ಟಾರೆಯಾಗಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. 2024ರಲ್ಲಿ ರಾಜ್ಯದಲ್ಲಿ ಒಟ್ಟು 21,993 ಪ್ರಕರಣಗಳು ದಾಖಲಾಗಿದ್ದು, ಇದು 2023ರ (21,889) ಅಂಕಿಅಂಶಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಕಳೆದ ವರ್ಷ ದಾಖಲಾದ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ ಇನ್ನೂ 14,184 ಸೈಬರ್ ಕೇಸ್‌ಗಳ ತನಿಖೆ ಬಾಕಿ ಉಳಿದಿದೆ ಎಂದು ವರದಿ ಉಲ್ಲೇಖಿಸಿದೆ.ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಬಹುತೇಕ ಸೈಬರ್ ಪ್ರಕರಣಗಳು ಕಂಪ್ಯೂಟರ್ ಮತ್ತು ತಂತ್ರಜ್ಞಾನ ಆಧಾರಿತ ಅಪರಾಧಗಳಾಗಿವೆ ಎಂದು NCRB ತಿಳಿಸಿದೆ.
ಗಮನಿಸಿ: ಸೈಬರ್ ವಂಚನೆಗಳಿಂದ ಪಾರಾಗಲು ಅಪರಿಚಿತ ಲಿಂಕ್‌ಗಳನ್ನು ಒತ್ತಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಸೈಬರ್ ವಂಚನೆಗೊಳಗಾದರೆ ತಕ್ಷಣ ‘1930’ ಸಹಾಯವಾಣಿಗೆ ಕರೆ ಮಾಡಿ.








