ಬೆಂಗಳೂರು: ರಾಜ್ಯದ ಬಿಪಿಎಲ್ (BPL) ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಪ್ರತಿ ತಿಂಗಳು ಅಕ್ಕಿಯ ಜೊತೆಗೆ 2 ಕೆಜಿ ರಾಗಿಯನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಒಟ್ಟು 10 ಕೆಜಿ ಅಕ್ಕಿಯ ಕೋಟಾದಲ್ಲಿ, ಇನ್ಮುಂದೆ 2 ಕೆಜಿ ರಾಗಿಯನ್ನು ಸೇರಿಸಲಾಗುವುದು. ರಾಜ್ಯದಲ್ಲಿ ಸದ್ಯ 1.14 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, ಒಟ್ಟು 4.01 ಕೋಟಿ ಸದಸ್ಯರಿದ್ದಾರೆ. ಇವರಿಗೆ ವಿತರಿಸಲು ಪ್ರತಿ ತಿಂಗಳು ಸುಮಾರು 57 ಸಾವಿರ ಮೆಟ್ರಿಕ್ ಟನ್ ರಾಗಿಯ ಅಗತ್ಯವಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮವು ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ 5.2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದೆ. ಇದು ಮುಂದಿನ 10 ತಿಂಗಳ ವಿತರಣೆಗೆ ಸಾಕಾಗಲಿದೆ. ಹೆಚ್ಚುವರಿ ಎನಿಸುವ ಸುಮಾರು 20 ರಿಂದ 30 ಸಾವಿರ ಮೆಟ್ರಿಕ್ ಟನ್ ರಾಗಿಯನ್ನು ಬೇರೆ ರಾಜ್ಯಗಳಿಗೆ ನೀಡಲು ನಿಗಮವು ತೀರ್ಮಾನಿಸಿದೆ.
ನೋಂದಾಯಿತ ರೈತರಿಗೆ ಮೇ 15ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ತಿಂಗಳಿನಿಂದಲೇ ಪಡಿತರ ಕೇಂದ್ರಗಳಲ್ಲಿ ರಾಗಿ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಕ್ರಮವು ರಾಜ್ಯದ ಜನರ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವ ಜೊತೆಗೆ, ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.








