ವಾಷಿಂಗ್ಟನ್: ಶನಿವಾರ ರಾತ್ರಿ ನಡೆದ ಪ್ರತಿಷ್ಠಿತ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್’ (WHCA) ಔತಣಕೂಟದ ವೇಳೆ ಸಂಭವಿಸಿದ ಭದ್ರತಾ ಲೋಪ ಮತ್ತು ಗುಂಡಿನ ಸದ್ದಿನ ವರದಿಗಳಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತುರ್ತಾಗಿ ವೇದಿಕೆಯಿಂದ ಸ್ಥಳಾಂತರಿಸಲಾಗಿದೆ. ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಈ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿದ್ದ ನೂರಾರು ಅತಿಥಿಗಳು ಭಯಭೀತರಾಗಿ ಟೇಬಲ್‌ಗಳ ಅಡಿಯಲ್ಲಿ ಅಡಗಿಕೊಂಡ ಪ್ರಸಂಗ ನಡೆಯಿತು.
ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನ ಬಾಲ್‌ರೂಮ್‌ನಲ್ಲಿ ಔತಣಕೂಟ ನಡೆಯುತ್ತಿದ್ದಾಗ ಸುಮಾರು ರಾತ್ರಿ 8:30ರ ವೇಳೆಗೆ ಏಕಾಏಕಿ 4 ರಿಂದ 5 ಬಾರಿ ಭಾರಿ ಶಬ್ದ ಕೇಳಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಸುರಕ್ಷಿತ ಕಾರಿಡಾರ್ ಮೂಲಕ ಹೊರಗೆ ಕರೆದೊಯ್ದರು.
ಹೋಟೆಲ್ ಒಳಗೆ ಗುಂಡು ಹಾರಿಸಿದ ಶಂಕಿತ ವ್ಯಕ್ತಿಯನ್ನು ಭದ್ರತಾ ಪಡೆಗಳು ಈಗಾಗಲೇ ವಶಕ್ಕೆ ಪಡೆದಿವೆ ಎಂದು ವರದಿಯಾಗಿದೆ.
ಗಣ್ಯರ ಸ್ಥಳಾಂತರ: ಅಧ್ಯಕ್ಷರ ಜೊತೆಗೆ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ಹಿರಿಯ ಸಲಹೆಗಾರ ಸ್ಟೀಫನ್ ಮಿಲ್ಲರ್ ಸೇರಿದಂತೆ ಪ್ರಮುಖ ಗಣ್ಯರನ್ನು ಹೋಟೆಲ್‌ನಿಂದ ಸ್ಥಳಾಂತರಿಸಲಾಯಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಧ್ಯಕ್ಷರು ಮತ್ತು ಅವರ ಕುಟುಂಬ ಸುರಕ್ಷಿತವಾಗಿದೆ ಎಂದು ಸೀಕ್ರೆಟ್ ಸರ್ವಿಸ್ ದೃಢಪಡಿಸಿದೆ.








