ಬೊಗೋಟಾ: ದಕ್ಷಿಣ ಕೊಲಂಬಿಯಾದ ಕೌಕಾ (Cauca) ಪ್ರಾಂತ್ಯದಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಮೃತರ ಸಂಖ್ಯೆ ಈಗ 14ಕ್ಕೆ ಏರಿಕೆಯಾಗಿದ್ದು, ಇಡೀ ದೇಶವನ್ನೇ ಈ ಘಟನೆ ಬೆಚ್ಚಿಬೀಳಿಸಿದೆ. ಪನಾಮೆರಿಕನ್ ಹೆದ್ದಾರಿಯಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿದ ಸಾವಿನ ಸಂಖ್ಯೆ: ಆರಂಭದಲ್ಲಿ 7 ಸಾವುಗಳು ವರದಿಯಾಗಿದ್ದರೂ, ತೀವ್ರವಾಗಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರಿಂದ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಮೃತರ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಈ ದಾಳಿಯನ್ನು “ನಾಗರಿಕರ ಮೇಲಿನ ಘೋರ ಹತ್ಯಾಕಾಂಡ” ಎಂದು ಕರೆದಿದ್ದಾರೆ. ದೇಶದ ಅತ್ಯಂತ ಕ್ರೂರ ನಾರ್ಕೋ-ಭಯೋತ್ಪಾದಕ (Narco-terrorist) ಹಾಗೂ ಫಾರ್ಕ್ (FARC) ಬಂಡುಕೋರರ ನಾಯಕ ಇವಾನ್ ಮೊರ್ಡಿಸ್ಕೋ (Ivan Mordisco) ಈ ಕೃತ್ಯದ ಮಾಸ್ಟರ್ಮೈಂಡ್ ಎಂದು ಅವರು ನೇರವಾಗಿ ದೂರಿದ್ದಾರೆ.
ದಾಳಿಕೋರರನ್ನು ‘ಫ್ಯಾಸಿಸ್ಟ್ಗಳು’ ಮತ್ತು ‘ಡ್ರಗ್ ಮಾಫಿಯಾದವರು’ ಎಂದು ಬಣ್ಣಿಸಿರುವ ಅಧ್ಯಕ್ಷರು, ಇವಾನ್ ಮೊರ್ಡಿಸ್ಕೋನನ್ನು ಹಿಡಿಯಲು ದೇಶದ ಅತ್ಯುತ್ತಮ ಸೈನಿಕರನ್ನು ನಿಯೋಜಿಸುವಂತೆ ಆದೇಶಿಸಿದ್ದಾರೆ.








