ಕೊಪ್ಪಳ : ರಾಜ್ಯದಲ್ಲಿ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು ಮತ್ತೆ ಕೆಲವು ಜಿಲ್ಲೆಗಳಲ್ಲಿ ಜನರು ತತ್ತರಿಸಿ ಹೋಗಿದ್ದಾರೆ.ಇದೀಗ ತುಂಗಭದ್ರಾ ಜಲಾಶಯ ಖಾಲಿಯಾಗುವ ಆತಂಕದಲ್ಲಿ ಸದ್ಯ ನಾಲ್ಕು ಜಿಲ್ಲೆಯ ಜನರು ಇದ್ದಾರೆ. ಹೌದು ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಮ್ ಸದ್ಯ ಖಾಲಿಯಾಗುವ ಸಾಧ್ಯತೆಗಳು ಇವೆ.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಕೇವಲ 12tmc ಮಾತ್ರ ನೀರು ಸಂಗ್ರಹವಿದೆ. ತುಂಗಭದ್ರ ಡ್ಯಾಮ್ ನಲ್ಲಿ ನೀರು ಖಾಲಿ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳ ಜನರಲ್ಲಿ ಆತಂಕ ಶುರುವಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ಜನರು ಆತಂಕದಲ್ಲಿ ಇದ್ದಾರೆ. 12 ಟಿಎಂಸಿ ನೀರಿನಲ್ಲಿ 2 ಟಿಎಂಸಿ ನೀರು ಜಲಚರಗಳಿಗೆ ಮೀಸಲು ಇಡಲಾಗಿದ್ದು, ಇನ್ನು ಉಳಿದ 10 ಟಿಎಂಸಿಯಲ್ಲಿ ಬೆಳೆಗಳು, ಕುಡಿಯುವ ನೀರಿಗೆ ಬಳಕೆ ಮಾಡಬೇಕು. ಹಾಗಾಗಿ ಕೇವಲ 10 ಟಿಎಂಸಿ ನೀರಿನಲ್ಲಿಯೇ ನಾಲ್ಕು ಜಿಲ್ಲೆಯ ಜನರು ಈಗ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ.








