ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಶಾಂತಿ ಮಾತುಕತೆಗಳಲ್ಲಿ ಉಂಟಾಗಿರುವ ಅನಿಶ್ಚಿತತೆಯು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಜಾಗರೂಕತೆಯ ಹೆಜ್ಜೆ ಇಟ್ಟಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ಕಂಡಿವೆ.
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ವಹಿವಾಟು ಆರಂಭವಾಗುತ್ತಿದ್ದಂತೆ ಸುಮಾರು 370 ಪಾಯಿಂಟ್ಸ್ ಕುಸಿದು 78,900 ರ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸುಮಾರು 90 ಪಾಯಿಂಟ್ಸ್ ಕುಸಿದು 24,480 ಮಟ್ಟಕ್ಕೆ ತಲುಪಿದೆ.
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಕೂಡ 20 ಪೈಸೆ ಕುಸಿತ ಕಂಡು 93.70ಕ್ಕೆ ತಲುಪಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸಿದ್ದರೂ, ಸಮುದ್ರ ಮಾರ್ಗದ ದಿಗ್ಬಂಧನ ಮುಂದುವರಿಸಲು ನಿರ್ಧರಿಸಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.ಹಾರ್ಮುಜ್ ಜಲಸಂಧಿಯ ವಿವಾದದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವುದು ಭಾರತದಂತಹ ಆಮದು ಅವಲಂಬಿತ ದೇಶದ ಆರ್ಥಿಕತೆಗೆ ಹಿನ್ನಡೆಯಾಗಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿದೆ.








