ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕಾರಣಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವ 60 ಎಕರೆ 23 ಗುಂಟೆ ಜಮೀನನ್ನು 30 ದಿನಗಳೊಳಗೆ ತೆರವುಗೊಳಿಸಿ ಹಸ್ತಾಂತರಿಸಬೇಕೆಂದು ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಮಾಡಿರುವ ಆದೇಶಕ್ಕೆ ಹೈಕೋರ್ಟ್, ಮಧ್ಯಂತರ ತಡೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾರಂಭದಲ್ಲಿ ಸರ್ವೇ ಸೆಟಲ್ಮೆಂಟ್ ಆಗಿಲ್ಲ ಮತ್ತು ಅರಣ್ಯದ ಗಡಿಯೇ ನಿಗದಿಯಾಗಿಲ್ಲ. ಜತೆಗೆ ಎರಡು ಸರ್ವೇ ನಂಬರ್ ಸಂಬಂಧ ವಿವಾದವಿದೆ. ಸರ್ವೇ ನಂಬರ್ 1ಕ್ಕೂ ಅರ್ಜಿದಾರರಿಗೂ ಸಂಬಂಧವಿಲ್ಲ. ಸರ್ವೇ ನಂಬರ್ 2ರಲ್ಲಿಅರ್ಜಿದಾರರ ಭೂಮಿ ಇದೆ. ದಾಖಲೆಗಳ ಮೂಲದ ಪ್ರಕಾರ 113 ಎಕರೆ ಅರಣ್ಯ ಭೂಮಿ ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆ ಇದೀಗ 245 ಎಕರೆ ಭೂಮಿ ತನಗೆ ಸೇರಿದ್ದೆಂದು ಹಕ್ಕು ಮಂಡಿಸುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮೇಲ್ಮನವಿ ಪ್ರಾಧಿಕಾರ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಮತ್ತು ಕೋಲಾರ ಜಿಲ್ಲಾಧಿಕಾರಿ ಮೂರು ಬಾರಿ ಸಲ್ಲಿಸಿರುವ ವರದಿ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕ ಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.








