ನವದೆಹಲಿ: ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಯುದ್ಧದ ಭೀತಿಯ ನಡುವೆ, ಅಲ್ಲಿ ನೆಲೆಸಿದ್ದ 10 ಲಕ್ಷಕ್ಕೂ ಹೆಚ್ಚು (1.03 ಮಿಲಿಯನ್) ಭಾರತೀಯರನ್ನು ಕೇಂದ್ರ ಸರ್ಕಾರವು ಸುರಕ್ಷಿತವಾಗಿ ರಕ್ಷಿಸಿ ತಾಯ್ನಾಡಿಗೆ ಮರಳಿ ತಂದಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.
ಈ ವರ್ಷದ ಫೆಬ್ರವರಿ ತಿಂಗಳಿನಿಂದ ಈ ರಕ್ಷಣಾ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 17ರ ವೇಳೆಗೆ ಒಟ್ಟು 10,38,000 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.ಏರ್ ಇಂಡಿಯಾ ಸೇರಿದಂತೆ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳ ಸಹಾಯದೊಂದಿಗೆ ನಿರಂತರವಾಗಿ ವಿಶೇಷ ವಿಮಾನಗಳನ್ನು (Chartered Flights) ಕಾರ್ಯಾಚರಿಸುವ ಮೂಲಕ ಜನರನ್ನು ಕರೆತರಲಾಗುತ್ತಿದೆ.
ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ ಅಸೀಮ್ ಮಹಾಜನ್ ಅವರು ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು, ಯುಎಇ, ಇರಾನ್, ಇರಾಕ್ ಮತ್ತು ಇಸ್ರೇಲ್ನಂತಹ ದೇಶಗಳಿಂದ ಭಾರತೀಯರನ್ನು ರಕ್ಷಿಸಲು 24/7 ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ.







