ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕ ನಡುವಿನ ದಶಕಗಳ ಕಾಲದ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಈಗ “ಅಂತಿಮ ಹಂತ”ದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಂಧಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಾಕಿಸ್ತಾನವನ್ನು ಅವರು ಬಹಿರಂಗವಾಗಿ ಶ್ಲಾಘಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಲು ತಾವೇ ಸ್ವತಃ ಇಸ್ಲಾಮಾಬಾದ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ.
ವೈಟ್ ಹೌಸ್ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಜೊತೆಗಿನ ಒಪ್ಪಂದ ಬಹಳ ಹತ್ತಿರದಲ್ಲಿದೆ. ಮುಂದಿನ 20 ವರ್ಷಗಳ ಕಾಲ ಅವರು ಅಣ್ವಸ್ತ್ರ ತಯಾರಿಸುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಲು ಇರಾನ್ ಒಪ್ಪಿದೆ. ಇದು ಇಡೀ ವಿಶ್ವಕ್ಕೆ ಒಳ್ಳೆಯ ಸುದ್ದಿ,” ಎಂದಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಕಾರ್ಯವೈಖರಿಯನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಪಾಕಿಸ್ತಾನವು ಎರಡೂ ದೇಶಗಳ ನಡುವಿನ ಕಂದಕವನ್ನು ಹೋಗಲಾಡಿಸುವಲ್ಲಿ ಅದ್ಭುತ ಕೆಲಸ ಮಾಡಿದೆ ಎಂದು ಅವರು ಬಣ್ಣಿಸಿದ್ದಾರೆ.
ಒಂದು ವೇಳೆ ಈ ಒಪ್ಪಂದವು ಅಂತಿಮಗೊಂಡು ಇಸ್ಲಾಮಾಬಾದ್‌ನಲ್ಲಿ ಸಹಿ ಹಾಕುವ ಸಂದರ್ಭ ಬಂದರೆ, “ನಾನು ಖಂಡಿತವಾಗಿಯೂ ಅಲ್ಲಿಗೆ ಹೋಗಬಹುದು” (I might go) ಎಂದು ಟ್ರಂಪ್ ಹೇಳಿದ್ದಾರೆ. ಇದು ದಕ್ಷಿಣ ಏಷ್ಯಾದ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಇರಾನ್ ತನ್ನಲ್ಲಿರುವ ಸಂವರ್ಧಿತ ಯುರೇನಿಯಂ (Enriched Uranium) ಅಥವಾ ಟ್ರಂಪ್ ಭಾಷೆಯಲ್ಲಿ “ಅಣು ಧೂಳನ್ನು” (Nuclear Dust) ಅಮೆರಿಕಕ್ಕೆ ಮರಳಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.








