ನವದೆಹಲಿ: ಭಾರತೀಯ ಕುಟುಂಬಗಳ ಬಳಿ ಇರುವ ಬಂಗಾರವು ಕೇವಲ ಆಭರಣವಲ್ಲ, ಅದು ದೇಶದ ಆರ್ಥಿಕ ಭವಿಷ್ಯವನ್ನೇ ಬದಲಿಸಬಲ್ಲ ಶಕ್ತಿ ಹೊಂದಿದೆ. ಇತ್ತೀಚಿನ ಅಸೋಚಾಮ್ (ASSOCHAM) ವರದಿಯ ಪ್ರಕಾರ, ಭಾರತೀಯರ ಮನೆಗಳಲ್ಲಿರುವ ಚಿನ್ನವನ್ನು ಸರಿಯಾದ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಗೆ ತಂದರೆ, 2047ರ ವೇಳೆಗೆ ಭಾರತದ ಜಿಡಿಪಿ (GDP) 40 ಟ್ರಿಲಿಯನ್ ಡಾಲರ್ ದಾಟಲು ಇದು ಪ್ರಮುಖ ಕಾರಣವಾಗಲಿದೆ.
ಭಾರತೀಯ ಕುಟುಂಬಗಳ ಬಳಿ ಅಂದಾಜು 25,000 ದಿಂದ 27,000 ಟನ್ ಚಿನ್ನವಿದೆ. ಇದರ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 5 ಟ್ರಿಲಿಯನ್ ಡಾಲರ್. ಇದು ಜಗತ್ತಿನ ಅತಿದೊಡ್ಡ ಖಾಸಗಿ ಚಿನ್ನದ ಸಂಗ್ರಹವಾಗಿದೆ.
ಒಂದು ವೇಳೆ ಪ್ರತಿ ವರ್ಷ ಮನೆಗಳಲ್ಲಿರುವ ಒಟ್ಟು ಚಿನ್ನದ ಪೈಕಿ ಕೇವಲ ಶೇ. 2ರಷ್ಟನ್ನು ಹಣಕಾಸು ಆಸ್ತಿಗಳಾಗಿ (ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಮುಂತಾದವು) ಪರಿವರ್ತಿಸಿದರೆ, 2047ರ ವೇಳೆಗೆ ಭಾರತದ ಆರ್ಥಿಕತೆಗೆ ಹೆಚ್ಚುವರಿಯಾಗಿ 7.5 ಟ್ರಿಲಿಯನ್ ಡಾಲರ್ ಸೇರ್ಪಡೆಯಾಗಲಿದೆ.
ಸಾಮಾನ್ಯ ಮುನ್ಸೂಚನೆಗಳ ಪ್ರಕಾರ 2047ಕ್ಕೆ ಭಾರತದ ಜಿಡಿಪಿ 34 ಟ್ರಿಲಿಯನ್ ಡಾಲರ್ ಇರಲಿದೆ. ಆದರೆ ಬಂಗಾರವನ್ನು ಆರ್ಥಿಕವಾಗಿ ಬಳಸಿಕೊಂಡರೆ ಇದು ಸುಲಭವಾಗಿ 41.5 ಟ್ರಿಲಿಯನ್ ಡಾಲರ್‌ಗೆ ಜಿಗಿಯಲಿದೆ.ಈ ಬಂಗಾರವನ್ನು ಹಣಕಾಸು ವ್ಯವಸ್ಥೆಗೆ ತರುವುದರಿಂದ ಮೂಲಸೌಕರ್ಯ, ಕೃಷಿ ಮತ್ತು ಉತ್ಪಾದನಾ ವಲಯಕ್ಕೆ ಭಾರಿ ಪ್ರಮಾಣದ ಬಂಡವಾಳ ಹರಿದುಬರಲಿದೆ.






