ಬಳ್ಳಾರಿ : 2025-2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಆಗದೆ ಕಳೆದ ಬಾರಿ 72 ಪ್ರತಿಶತ ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದು ಈ ಬಾರಿ ದಾಖಲೆಯ 86 ಪ್ರತಿಶತ ವಿದ್ಯಾರ್ಥಿಗಳು ಸೇರ್ಗಡೆ ಆಗಿದ್ದು ದಾಖಲೆ ಮಟ್ಟದಲ್ಲಿ ಫಲಿತಾಂಶ ಏರಿಕೆ ಆಗಿದೆ.
ಇದೀಗ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ದರ್ಜೆ(ಶೇಕಡಾ 80.1)ಯಲ್ಲಿ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಹೌದು ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿರುವ ಕೈದಿಯೊಬ್ಬರು ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ.
ಬೆಂಗಳೂರು ಮೂಲದ ಎಸ್.ಅಶೋಕ್ ಕುಮಾರ್ ಎಂಬಾತ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಕಳೆದ 7 ವರ್ಷಗಳಿಂದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅಶೋಕ್ ಕುಮಾರ್, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಇಂಗಿತ ವ್ಯಕ್ತಪಡಿಸಿದ್ದ. ಇದಕ್ಕೆ ಸಹಕರಿಸಿದ ಜೈಲಿನ ಅಧಿಕಾರಿಗಳು ದೂರ ಶಿಕ್ಷಣದ ಮೂಲಕ ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು.
ಜೈಲಿನ ಪ್ರತ್ಯೇಕ ಸೆಲ್ನಲ್ಲಿಯೇ ಅಭ್ಯಾಸ ಮಾಡುತ್ತಿದ್ದ ಅಶೋಕ್, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ. ಇದೀಗ ಫಲಿತಾಂಶ ಹೊರಬಿದ್ದಿದ್ದು, 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ. ಕನ್ನಡ 82, ಇಂಗ್ಲಿಷ್ 69, ಇತಿಹಾಸ 94, ಅರ್ಥಶಾಸ್ತ್ರ 84, ಸಮಾಜಶಾಸ್ತ್ರ 77 ಹಾಗೂ ರಾಜ್ಯಶಾಸ್ತ್ರದಲ್ಲಿ 75 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೂ ಓದುವ ಅಭ್ಯಾಸ ರೂಢಿಸಿಕೊಂಡಿದ್ದರು. ಹೀಗಾಗಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಇದೀಗ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾರೆ. ಮುಂದಿನ ದಿನಗಳಲ್ಲಿ ಪದವಿ ಶಿಕ್ಷಣದ ಬಗ್ಗೆ ಆಸಕ್ತಿ ತೋರಿದಲ್ಲಿ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳಲ್ಲಿ ಒಬ್ಬರಾದ ಅಶೋಕ್, ಪಿಯುಸಿ ಪರೀಕ್ಷೆಯಲ್ಲಿ 80.1% ಅಂಕಗಳನ್ನು ಪಡೆದಿರುವುದು ಹೃದಯಸ್ಪರ್ಶಿಯಾಗಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಜೈಲು ಅಧಿಕಾರಿಗಳ ಬೆಂಗಾವಲಿನೊಂದಿಗೆ ಪರೀಕ್ಷೆಗೆ ಹಾಜರಾಗಿದ್ದರು. ಮುಂದಿನ ಉತ್ತಮ ಭವಿಷ್ಯದ ಬಗ್ಗೆಗಿನ ಅವರ ಭರವಸೆಯನ್ನು ಜೈಲಿನ ಗೋಡೆಗಳು ಇನ್ನೂ ಹುಸಿಗೊಳಿಸಿಲ್ಲ ಎಂಬುದನ್ನು ಕಂಡು ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
It’s heartening to see that one of our life convict prisoners Ashok has obtained 80.1% marks in PUC exam. He appeared under Prison escort from Ballari Central Prison for his exams.
Glad to see that Walls of the prison has not subdued his hopes for a better future. pic.twitter.com/Nzlcy076SR
— alok kumar (@alokkumar6994) April 9, 2026








